ಪೌರಿ(ಉತ್ತರಾಖಂಡ), ಸೆ 25 (DaijiworldNews/DB): ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಸಿಗುವವರೆಗೂ ಅಂತ್ಯಕ್ರಿಯೆ ನೆರವೇರಿಸಲು ಬಿಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ.
ಮಗಳನ್ನು ಹೊಡೆದು ನದಿಗೆಸೆಯಲಾಗಿದೆ ಎಂಬುದಾಗಿ ತಾತ್ಕಾಲಿಕ ವರದಿಯಲ್ಲಿ ನೋಡಿದ್ದೇವೆ. ಆದರೆ ಅಂತಿಮ ವರದಿಗಾಗಿ ಕಾಯುತ್ತಿದ್ದು, ಅದನ್ನು ನೀಡುವವರೆಗೂ ಆಕೆಯ ಅಂತ್ಯಕ್ರಿಯೆ ನೆರವೇರಿಸಲು ಬಿಡುವುದಿಲ್ಲ ಎಂದು ಅಂಕಿತಾ ಸಹೋದರ ಅಜಯ್ ಸಿಂಗ್ ಭಂಡಾರಿ ಹೇಳಿರುವುದಾಗಿ ವರದಿಯಾಗಿದೆ.
ಈ ನಡುವೆ ಅಂಕಿತಾ ಕುಟುಂಬದವರ ಮನವೊಲಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಆಕೆಯ ವಾಟ್ಸಾಪ್ ಚಾಟ್ ಕುರಿತು ತನಿಖೆ ನಡೆಸಲಾಗುತ್ತಿದೆ. ಅತಿಥಿಗಳಿಗೆ ’ಹೆಚ್ಚುವರಿ ಸೇವೆ’ ನೀಡಿದರೆ 10 ಸಾವಿರ ರೂ. ಸಿಗುತ್ತದೆ ಎಂದು ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಮಾಲೀಕರು ಒತ್ತಡ ಹಾಕಿರುವುದಾಗಿ ಆಕೆ ತನ್ನ ಸ್ನೇಹಿತನಲ್ಲಿ ತಿಳಿಸಿದ್ದಳು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಈ ನಡುವೆ 10 ಸಾವಿರ ರೂ.ಗಳಿಗೆ ತನ್ನನ್ನು ಮಾರಿಕೊಳ್ಳುವುದಿಲ್ಲ ಎಂದು ಸಹದ್ಯೋಗಿಗೆ ಆಕೆ ಸಂದೇಶ ಕಳುಹಿಸಿದ್ದಳು ಎಂದೂ ತಿಳಿದು ಬಂದಿದೆ.
ಪೌರಿ ಗಡವಾಲ್ ಜಿಲ್ಲೆಯ ಭೋಗ್ ಪುರದ ರೆಸಾರ್ಟ್ಗೆ ಭೇಟಿ ನೀಡಿದ್ದ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ರೆಸಾರ್ಟ್ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್, ಉದ್ಯೋಗಿ ಅಂಕಿತ್ ಗುಪ್ತಾ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ತನಿಖೆ ವೇಳೆ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ತಪ್ಪೊಪ್ಪಿಕೊಂಡಿದ್ದ.