ಲಖನೌ, ಸೆ 24 (DaijiworldNews/DB): ಗಲಾಟೆ ವೇಳೆ ಎದುರಾಳಿ ಬಾಲಕನ ಪರ ವಹಿಸಿ ಮಾತನಾಡಿದ್ದಕ್ಕೆ ಸಿಟ್ಟುಗೊಂಡ ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಶಿಕ್ಷಕನನ್ನು ಬೆನ್ನಟ್ಟಿ ಮೂರು ಬಾರಿ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಿಕ್ಷಕ ಅಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆ ನಡೆದಿದ್ದಾಗ ಶಿಕ್ಷಕ ಇನ್ನೊಬ್ಬ ಬಾಲಕನ ಪರವಹಿಸಿ ಮಾತನಾಡಿದ್ದಾರೆ. ಅಲ್ಲದೆ ಈ ವಿದ್ಯಾರ್ಥಿಗೆ ಬೈದಿದ್ದರು. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿ ಪಿಸ್ತೂಲ್ ಹಿಡಿದುಕೊಂಡು ಶಿಕ್ಷಕನ ಬೆನ್ನತ್ತಿ ಹೋಗಿ ಗುಂಡು ಹಾರಿಸಿದ್ದಾನೆ. ಮೂರು ಬಾರಿ ಗುಂಡು ಹಾರಿಸಿದ್ದು, ಶಿಕ್ಷಕನಿಗೆ ತೀವ್ರ ಗಾಯ ಉಂಟಾಗಿದೆ. ಆದರೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಶಿಕ್ಷಕ ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ರಾಜೀವ್ ದೀಕ್ಷಿತ್, ಶಿಕ್ಷಕನಿಗೆ ಗುಂಡು ತಗುಲಿದ್ದರೂ, ಸೂಕ್ಷ್ಮ ಅಂಗಗಳಿಗೆ ತಗುಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಾಗದ ಕಾರಣ ಲಖನೌಗೆ ಕರೆದೊಯ್ಯಲಾಗಿದೆ. ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.