ನವದೆಹಲಿ, ಸೆ 24 (DaijiworldNews/DB): ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಯುವಕರು ಪಣ ತೊಟ್ಟಿದ್ದಾರೆ. ಇಲ್ಲಿನ ಜನರಿಗೆ ಬಿಜೆಪಿ ಪರ ಒಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಡಿ ಹಿಮಾಚಲ ಪ್ರದೇಶದಲ್ಲಿ ಯುವ ವಿಜಯ್ ಸಂಕಲ್ಪ್ ರ್ಯಾಲಿಯನ್ನುದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಅವರು, ಸ್ಪಷ್ಟ ಮತ್ತು ಪ್ರಾಮಾಣಿಕ, ಪಾರದರ್ಶಕ ನೆಲೆಗಟ್ಟಿನಲ್ಲಿ ಹಿಮಾಚಲಪ್ರದೇಶದ ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ವಿಚಾರ ಇಲ್ಲಿನ ಯುವಕರಿಗೆ ಗೊತ್ತಿದೆ. ಹೀಗಾಗಿ ಯುವಕರು ಬಿಜೆಪಿಯನ್ನು ಮೆಚ್ಚುತ್ತಿದ್ದಾರೆ ಎಂದರು.
ಪ್ರಸ್ತುತ ವಿಶ್ವದ ನಂಬಿಕೆ ಭಾರತ ಸರ್ಕಾರದ ಮೇಲಿದೆ. ಯುವಕರಿಗೆ ಅವಕಾಶ ನೀಡುವುದು ನಮ್ಮ ಆದ್ಯ ಕರ್ತವ್ಯ. ರಾಜ್ಯದ ಪ್ರವಾಸೋದ್ಯಮ ಉತ್ತೇಜನ, ಅಭಿವೃದ್ದಿ ಆ ಮೂಲಕ ದೇಶದ ಅಭಿವೃದ್ದಿ ನಮ್ಮ ಗುರಿ ಎಂದು ಇದೇ ವೇಳೆ ಪ್ರಧಾನಿ ಮೋದಿ ತಿಳಿಸಿದರು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತಿ ಬಾರಿಯ ಚುನಾವಣೆಯಲ್ಲೂ ಸರ್ಕಾರ ಬದಲಾಗುತ್ತಿದ್ದವು. ಆದರೆ ಈಗ ಹಾಗಿಲ್ಲ. ಬಿಜೆಪಿಯನ್ನು ಜನರು ಪುನರಾಯ್ಕೆಗೊಳಿಸಿರುವುದನ್ನು ನೀವೆಲ್ಲರೂ ಕಂಡಿದ್ದೀರಿ. ಪಕ್ಷದ ಅಭಿವೃದ್ದಿ ಸಂಕಲ್ಪವೇ ಇದಕ್ಕೆಲ್ಲಾ ಕಾರಣ ಎಂದರು.