ಪಟ್ನಾ, ಸೆ 24 (DaijiworldNews/DB): ಬಿಹಾರದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆದಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನೇನೋ ಮಾತನಾಡಲು ಆರಂಭಿಸಿದ್ದಾರೆ ಎಂದು ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.
ಬಿಹಾರದ ಮಹಾ ಮೈತ್ರಿ ಸರ್ಕಾರದ ಬಗ್ಗೆ ಅಮಿತ್ ಶಾ ಶುಕ್ರವಾರ ಟೀಕಿಸಿದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ. ಬಿಹಾರದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆದಿರುವುದರಿಂದ ಅವರು 'ಜಂಗಲ್ ರಾಜ್' ಎಂದೆಲ್ಲಾ ಟೀಕಿಸುತ್ತಿದ್ದಾರೆ. ಆದರೆ ಅಮಿತ್ ಶಾ ಗುಜರಾತಿನಲ್ಲಿದ್ದಾಗ ಅಲ್ಲಿ ಜಂಗಲ್ ರಾಜ್ ಇತ್ತು ಎಂದು ವಾಗ್ದಾಳಿ ನಡೆಸಿದರು.
2024ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅವರು ಹಗಲುಗನಸು ಕಾಣುತ್ತಿದ್ದಾರೆ. ಕಾದು ನೋಡೋಣ ಎಂದರು.
ಬಿಹಾರದ ಪೂರ್ಣಿಯಾದಲ್ಲಿ ಶುಕ್ರವಾರ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ನಿತೀಶ್ ಕುಮಾರ್ ಪ್ರಧಾನಿಯಾಗುವ ಆಸೆಯಿಂದ ಬಿಜೆಪಿಗೆ ದ್ರೋಹ ಬಗೆದಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದರು.