ಉತ್ತರಾಖಂಡ್, ಸೆ 24 (DaijiworldNews/DB): ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುಲ್ಕಿತ್ ಆರ್ಯನ ತಂದೆ, ಬಿಜೆಪಿ ಮುಖಂಡ ವಿನೋದ್ ಆರ್ಯ ಹಾಗೂ ಅಂಕಿತ್ ಆರ್ಯನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದಂತೆ ವಿನೋದ್ ಆರ್ಯ ಮತ್ತು ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮನ್ ವೀರ್ ಚೌಹಾಣ್ ತಿಳಿಸಿರುವುದಾಗಿ ವರದಿಯಾಗಿದೆ.
19 ವರ್ಷದ ರಿಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಪುಲ್ಕಿತ್ ಆರ್ಯನ ಒಡೆತನದಲ್ಲಿದ್ದ ಖಾಸಗಿ ರೆಸಾರ್ಟ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದಳು. ಇಂದು ಬೆಳಗ್ಗೆ ಆಕೆಯ ಮೃತದೇಹ ಚಿಲ್ಲಾ ಪವರ್ ಹೌಸ್ ಬಳಿ ಪತ್ತೆಯಾಗಿತ್ತು. ಬಳಿಕ ಇದು ಕೊಲೆ ಪ್ರಕರಣವೆಂಬುದು ಗೊತ್ತಾದ ನಂತರ ರೆಸಾರ್ಟ್ ಮಾಲೀಕ ಪುಲ್ಕಿತ್ ಮೌರ್ಯ ಹಾಗೂ ಇಬ್ಬರು ನೌಕರರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವೈಯಕ್ತಿಕ ವಿಷಯದಲ್ಲಿ ಆದ ಗಲಾಟೆಯಿಂದಾಗಿ ರೆಸಾರ್ಟ್ ಬಳಿಯ ಕಾಲುವೆಗೆ ಆಕೆಯನ್ನು ತಳ್ಳಿರುವುದಾಗಿ ಆರ್ಯ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ಆರ್ಯ, ಈಗಾಗಲೇ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅಪರಾಧ ಸಾಬೀತಾದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.