ನವದೆಹಲಿ, ಸೆ 24 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ಪ್ರತಿಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು. ಇದರಿಂದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ ಎಂದು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2019ರ ಮೇ ತಿಂಗಳಿಂದ 2020ರ ಮೇ ತಿಂಗಳವರೆಗೆ ಮಾಡಿದ ಭಾಷಣಗಳನ್ನು ಸೇರಿಸಿ ಪ್ರಕಟಿಸಿದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರೋಗ್ಯ, ವಿದೇಶಾಂಗ ವ್ಯವಹಾರಗಳ ನೀತಿ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಸಾಧನೆ ಉತ್ತುಂಗದಲ್ಲಿದೆ. ದೇಶಾಭಿವೃದ್ದಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ಆದರೆ ಒಂದು ವರ್ಗದ ಜನ ಮತ್ತು ಪ್ರತಿಪಕ್ಷಗಳ ನಾಯಕರಿಗೆ ಅವರ ಮೇಲೆ ಅಸಮಾಧಾನವಿದ್ದು, ಇದರ ಶಮನಕ್ಕೆ ಪ್ರತಿಪಕ್ಷಗಳ ನಾಯಕರ ಭೇಟಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕೇರಳ ರಾಜ್ಯಪಾಲ ಮೊಹಮ್ಮದ್ ಆರೀಫ್ ಖಾನ್ ಮಾತನಾಡಿ, ತ್ರಿವಳಿ ತಲಾಖ್ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಆ ಧೈರ್ಯವನ್ನು ನೆಹರೂ ಮಾಡಿರಲಿಲ್ಲ ಎಂದರು.