ನವದೆಹಲಿ, ಸೆ 24 (DaijiworldNews/DB): ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಐವರು ಕಾಂಗ್ರೆಸ್ ನಾಯಕರಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ಜಾರಿ ಮಾಡಿದೆ.
ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ, ಸಿಕಂದರಾಬಾದ್ನ ಮಾಜಿ ಸಂಸದ ಪಿ. ಅಂಜನಕುಮಾರ್ ಯಾದವ್, ರಾಜ್ಯದ ಮಾಜಿ ಸಚಿವರಾದ ಜೆ. ಗೀತಾರೆಡ್ಡಿ, ಎಂ.ಡಿ. ಅಲಿ ಶಬ್ಬೀರ್, ಪಿ. ಸುದರ್ಶನ್ ರೆಡ್ಡಿ ಅವರಿಗೆ ಇಡಿ ನೋಟಿಸ್ ಜಾರಿಗೊಳಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಭಾಗಿಯಾಗಿರುವ ಕಂಪೆನಿಗಳ ನಖಾತೆಗಳಿಗೆ ಈ ಐವರು ನಾಯಕರು ಭಾರೀ ಹಣ ವರ್ಗಾವಣೆ ಮಾಡಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ನೊಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರು ವಿಚಾರಣೆ ಎದುರಿಸುತ್ತಿದ್ದು, ಇದೀಗ ಮತ್ತಷ್ಟು ಕಾಂಗ್ರೆಸ್ ನಾಯಕರಿಗೆ ಈ ಪ್ರಕರಣ ಸಂಕಷ್ಟ ತಂದೊಡ್ಡಿದೆ.