ಕುಷ್ಟಗಿ, ಸೆ 24 (DaijiworldNews/DB): ಅಡುಗೆ ತಯಾರಿಸುವ ವೇಳೆ ಬಿಸಿ ನೀರು ಮೈಮೇಲೆ ಬಿದ್ದು ಅಡುಗೆ ಸಹಾಯಕ ಗಂಭೀರ ಗಾಯಗೊಂಡ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಅಡುಗೆ ಸಹಾಯಕ, ತಾವರಗೇರಾ ಗ್ರಾಮದ ಶಿವು ಹಳ್ಳಪ್ಪ ಕೊಂಬಿನ್ ಗಾಯಗೊಂಡವರು. ಪಟ್ಟಣದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿರುವ ಅವರು, ಸೆ. 22 ರಂದು ಒಲೆಯ ಮೇಲಿದ್ದ ಸಾಂಬಾರು ಪಾತ್ರೆಯನ್ನು ಒಲೆಯಿಂದ ತೆಗೆದು ಹೊರಗಿಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಪಾತ್ರೆಯಲ್ಲಿದ್ದ ಸಾಂಬಾರು ಶಿವು ಅವರ ಮೇಲೆ ಬಿದ್ದು ದೇಹದ ಶೇ.50ರಷ್ಟು ಭಾಗ ಸುಟ್ಟು ಹೋಗಿದೆ. ಕೂಡಲೇ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶೇ. 50ರಷ್ಟು ಭಾಗ ಸುಟ್ಟು ಹೋದ ಕಾರಣ ಅಲ್ಲಿ ದಾಖಲಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.
ಬಳಿಕ ಇತರ ಎರಡು ಖಾಸಗಿ ಆಸ್ಪತ್ರೆಗಳಿಗೆ ತೆರಳಿದಾಗ ಅಲ್ಲಿಯೂ ದಾಖಲಿಸಿಕೊಳ್ಳದ ಕಾರಣ ಕೊನೆಗೆ ಸೆಕ್ಯೂರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಸದ್ಯ ಅವರು ಜೀವನ್ಮರಣ ಹೋರಾಟದಲ್ಲಿದ್ದಾರೆ ಎಂದು ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಈರಪ್ಪ ಅವರು ತಿಳಿಸಿರುವುದಾಗಿ ವರದಿಯಾಗಿದೆ.