ಶಿವಮೊಗ್ಗ, ಸೆ 24 (DaijiworldNews/DB): ನಿಷೇಧಿತ ಐಎಸ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳು ಬಾಂಬ್ ಸಿದ್ದಪಡಿಸಿ ನದಿದಂಡೆಯೊಂದರ ಪ್ರದೇಶದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್, ಶಿವಮೊಗ್ಗದ ಗುರುಪುರ ಬಳಿಯ ತುಂಗಾ ನದಿ ದಂಡೆಯ ಕೆಮ್ಮನಗುಂಡಿಯಲ್ಲಿ ಆರೋಪಿಗಳು ಈ ಬಾಂಬ್ನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಸ್ಪೋಟಿಸಿದ್ದರು. ಅಲ್ಲದೆ ರಾಷ್ಟ್ರಧ್ವಜ ಸುಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಸ್ಪೋಟ ನಡೆಸಿದ ಸ್ಥಳದಿಂದ ಅವಶೇಷಗಳನ್ನು, ಅರೆಬರೆ ಸುಟ್ಟ ಸ್ಥಿತಿಯಲ್ಲಿದ್ದ ತ್ರಿವರ್ಣ ಧ್ವಜ ಮತ್ತು ವೀಡಿಯೋವನ್ನು ವಿಧಿ ವಿಜ್ಞಾನ ತಜ್ಞರು ಸಂಗ್ರಹ ಮಾಡಿದ್ದಾರೆ ಎಂದರು.
ಮಾಝ್ ಮುನೀರ್ ಅಹಮದ್, ಸೈಯದ್ ಯಾಸೀನ್ ಈಗಾಗಲೇ ಬಂಧಿಸಲ್ಪಟ್ಟಿದ್ದು, ಪ್ರಮುಖ ಆರೋಪಿ ಶಾರೀಕ್ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲರೂ ಟೆಲಿಗ್ರಾಂ ಅಪ್ಲಿಕೇಶನ್ ಮೂಲಕ ಐಎಸ್ ಸಂಘಟನೆಯ ಅಧಿಕೃತ ಮಾಧ್ಯಮ ಅಲ್-ಹಯತ್ನ ಸದಸ್ಯರಾಗಿ ಸೇರ್ಪಡೆಯಾಗಿದ್ದರು. ಅಲ್ಲಿಂದಲೇ ಸಂಘಟನೆ ಪ್ರಚಾರಕ್ಕೆ ಬೇಕಾದ ಮಾಹಿತಿಗಳನನ್ನು ಸಂಗ್ರಹಿಸುತ್ತಿದ್ದರು. ಪರಸ್ಪರ ಸಂಪರ್ಕಕ್ಕೆ ಆರೋಪಿಗಳು ಟೆಲಿಗ್ರಾಂ, ಇನ್ಸ್ಟಾಗ್ರಾಂ, ವಿಕ್ಕರ್, ವೈರ್ ಮುಂತಾದವುಗಳನ್ನೇ ಬಳಸುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದರು.
ಬಂಧಿತರ ಪೈಕಿ ಸೈಯದ್ ಯಾಸೀನ್ ಎಲೆಕ್ಟ್ರಿಕ್ ಎಂಜಿನಿಯರ್ ಆಗಿದ್ದು, ಬಾಂಬ್ ತಯಾರಿಕೆ ಬಗ್ಗೆ ಐಎಸ್ನಿಂದಲೇ ಈತ ಮಾಹಿತಿಯನ್ನು ಪಡೆದುಕೊಂಡಿದ್ದ. ಅಲ್ಲದೆ ಬಾಂಬ್ಗೆ ಬೇಕಿರುವ ಟೈಮರ್ ರಿಲೆ ಸರ್ಕ್ಯೂಟ್ನ್ನು ಅಮೆಜಾನ್ನಿಂದ ಖರೀದಿಸಿದ್ದ. ಇನ್ನುಳಿದಂತೆ 9 ವೋಲ್ಟ್ನ ಎರಡು ಬ್ಯಾಟರಿ, ಸ್ವಿಚ್, ವೈರ್ಗಳು, ಮ್ಯಾಚ್ಬಾಕ್ಸ್ ಮತ್ತು ಬಾಂಬ್ ಸಿದ್ದಪಡಿಸಲು ಬೇಕಾಗುವ ಇತರ ಸಾಮಾಗ್ರಿಗಳನ್ನು ಶಿವಮೊಗ್ಗ ನಗರದಿಂದಲೇ ಖರೀದಿಸಿದ್ದ ಎಂದರು.
ಪ್ರಾಯೋಗಿಕವಾಗಿ ಬಾಂಬ್ ಸ್ಪೋಟಿಸಿರುವುದು ಯಶಸ್ವಿಯಾಗಿದ್ದ ಕಾರಣ ಆರೋಪಿಗಳು ಭವಿಷ್ಯದಲ್ಲಿ ವಿವಿಧ ಕಡೆಗಳಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು. ಹಣಕಾಸಿನ ನೆರವನ್ನು ತಲೆಮರೆಸಿಕೊಂಡಿರುವ ಆರೋಪಿ ಶಾರೀಕ್ ಯಾಸಿನ್ಗೆ ಆನ್ಲೈನ್ ಮುಖಾಂತರ ಪಾವತಿ ಮಾಡುತ್ತಿದ್ದ ಎಂದು ಲಕ್ಷ್ಮೀಪ್ರಸಾದ್ ವಿವರಿಸಿದರು.
ಆರೋಪಿಗಳ ಬಂಧನವಾದ ಬಳಿಕ ಹನ್ನೊಂದು ಕಡೆ ದಾಳಿ ಮಾಡಲಾಗಿದೆ. ಈ ಎಲ್ಲಾ ಸ್ಥಳಗಳಿಂದ 14 ಮೊಬೈಲ್ ಫೋನ್, ಒಂದು ಡಾಂಗಲ್, ಎರಡು ಲ್ಯಾಪ್ಟಾಪ್, ಒಂದು ಪೆನ್ಡ್ರೈವ್, ಎಲೆಕ್ಟ್ರಾನಿಕ್ ಗಾಡ್ಜೆಟ್ಸ್ಗಳು, ರಿಲೆ ಸರ್ಕಿಟ್, ಬಲ್ಬ್ಗಳು, ಮ್ಯಾಚ್ ಬಾಕ್ಸ್, ವೈರ್, ಬ್ಯಾಟರಿಗಳು, ಸ್ಫೋಟಕ ವಸ್ತುಗಳು, ಮಾರುತಿ ರಿಡ್ಜ್ ಕಾರು ಸೇರಿದಂತೆ ಮಹತ್ವದ ದಾಖಲೆಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.