ತಿರುವನಂತಪುರ, ಸೆ 24 (DaijiworldNews/DB): ನನಗೆ 25 ಕೋಟಿ ರೂ. ಲಾಟರಿ ಒಲಿದ ಬಳಿಕ ಮನಃಶಾಂತಿಯೇ ಹಾಳಾಗಿದೆ. ಸ್ವಂತ ಮನೆಯಲ್ಲಿ ವಾಸವೇ ಕಷ್ಟವಾಗಿದೆ. ನನಗೆ ಈ ಹಣ ಬರಲೇಬಾರದಿತ್ತು..ಇದು ಕೇರಳ ಸರ್ಕಾರದ ಓಣಂ ಲಕ್ಕಿ ಬಂಪರ್ ಲಾಟರಿ ಡ್ರಾದಲ್ಲಿ 25 ಕೋಟಿ ರೂ. ಗೆದ್ದ ತಿರುವನಂತಪುರಂ ಶ್ರೀವರಂನ ಆಟೋ ಚಾಲಕ ಅನೂಪ್ ಅವರ ನೋವಿನ ಮಾತು.
ಅನೂಪ್ ಅವರಿಗೆ ಓಣಂ ಲಕ್ಕಿ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ. ಬಂದಿದೆ ಎಂಬುದಾಗಿ ಕಳೆದೈದು ದಿನಗಳ ಹಿಂದೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಈ ವಿಚಾರ ತಿಳಿದ ತತ್ಕ್ಷಣ ಹಲವಾರು ಮಂದಿ ಅನೂಪ್ ಅವರ ಅದೃಷ್ಟವನ್ನು ಕೊಂಡಾಡಿದ್ದರು. ಆದರೆ ಅದೇ ಅನೂಪ್ ಅವರು ಈ ಹಣ ನನಗೆ ಬರಲೇಬಾರದಿತ್ತು ಎಂದು ಇದೀಗ ನೋವು ವ್ಯಕ್ತಪಡಿಸುತ್ತಿದ್ದಾರೆ.
ಮೊದಲೆರಡು ದಿನ ಖುಷಿಯಿಂದಿದ್ದೆ. ಆದರೆ ಪ್ರಸ್ತುತ ಹೊರ ಹೋಗುವುದಕ್ಕೇ ಭಯವಾಗುತ್ತಿದೆ. ನನ್ನನ್ನು ನೋಡಿದ ಕೂಡಲೇ ಎಲ್ಲರೂ ಹಣದ ನೆರವು ಕೇಳಿಕೊಂಡು ಬಳಿ ಬರುತ್ತಿದ್ದಾರೆ. ನನಗೆ ಇಷ್ಟೊಂದು ಹಣ ಬರಬಾರದಿತ್ತು, ಸಣ್ಣ ಮೊತ್ತದ ಹಣ ಬಂದಿದ್ದರೆ ಸಾಕಿತ್ತು. ಆತ್ಮೀಯರಾಗಿದ್ದ ಗೆಳೆಯರೇ ಶತ್ರುಗಳಾಗುವ ಹಂತಕ್ಕೆ ಬಂದು ನಿಂತಿದ್ದಾರೆ. ಅಲ್ಲದೆ ಜನ ಮನೆ ಹತ್ತಿರ ಬರುತ್ತಿರುವುದರಿಂದ ನೆರೆಹೊರೆಯವರೂ ನನ್ನ ಮೇಲೆ ಆಕ್ರೋಶಗೊಂಡಿದ್ದಾರೆ. ಒಟ್ಟಿನಲ್ಲಿ ನೆಮ್ಮದಿಯೇ ಹಾಳಾಗಿದೆ ಎಂದು ಅನೂಪ್ ಹೇಳಿರುವುದಾಗಿ ವರದಿಯಾಗಿದೆ.
ನನಗೆ ಲಾಟರಿ ಒಲಿದಿದೆ ಎಂಬ ವಿಷಯ ಗೊತ್ತಾದ ದಿನದಿಂದಲೇ ಹಲವಾರು ಮಂದಿ ಬಂದು ನನ್ನಲ್ಲಿ ಹಣಕಾಸಿನ ನೆರವು ಕೇಳುತ್ತಿದ್ದಾರೆ. ದಿನನಿತ್ಯ ಮನೆ ಮುಂದೆ ಜನರಿರುತ್ತಾರೆ. ಹಿಂದೆ ನಾನು ಆಟೋದಲ್ಲಿ ದುಡಿದು ಸಂಪಾದನೆ ಮಾಡಿಕೊಂಡು ಚೆನ್ನಾಗಿದ್ದೆ. ಆದರೆ ಈಗ ನನ್ನ ಮನಃಶಾಂತಿಯೇ ಹೊರಟು ಹೋಗಿದೆ. ಸ್ವಂತ ಮನೆಯಲ್ಲಿ ವಾಸಿಸಲು ಅಸಾಧ್ಯವಾದ ಪರಿಸ್ಥಿತಿ ನನ್ನದಾಗಿದೆ ಎನ್ನುತ್ತಾರೆ ಅನೂಪ್.
ಅನೂಪ್ ಅವರು ಪತ್ನಿ, ತಾಯಿ ಮತ್ತು ಮಕ್ಕಳೊಂದಿಗೆ ಶ್ರೀವರಂನಲ್ಲಿ ವಾಸವಾಗಿದ್ದಾರೆ. 25 ಕೋಟಿ ರೂ.ಗಳ ಪೈಕಿ ತೆರಿಗೆ ಮತ್ತು ಕಮಿಷನ್ ಕಳೆದು 15.75 ಕೋಟಿ ರೂ.ಗಳನ್ನು ಅವರು ಲಾಟರಿ ಹಣದಿಂದ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.