ಜೈಪುರ್, ಸೆ 24 (DaijiworldNews/DB): ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜಸ್ತಾನದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಈ ನಡುವೆ ಸಚಿನ್ ಪೈಲಟ್ ಅವರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಈ ನಡುವೆ ರಾಜಸ್ತಾನ ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಅಧ್ಯಕ್ಷರಾದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಆರಂಭವಾಗಿದ್ದು, ಹಲವರ ಹೆಸರುಗಳು ಕೇಳಿ ಬರುತ್ತಿವೆ.
ಸಚಿನ್ ಪೈಲಟ್ ಅವರು ಈಗಾಗಲೇ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೆಹ್ಲೋಟ್ ಬಣದ ಶಾಸಕರನ್ನೂ ಭೇಟಿ ಮಾಡಿದ್ದಾರೆಂದು ತಿಳಿದು ಬಂದಿದೆ. ಆದರೆ ಸಚಿನ್ ಪೈಲಟ್ ಸಿಎಂ ಸ್ಥಾನಕ್ಕೇರುವ ದಾರಿಯೂ ಸುಲಭವಾಗಿಲ್ಲ. ಏಕೆಂದರೆ ಪೈಲಟ್ ಅವರನ್ನು ಸಿಎಂ ಮಾಡುವ ಆಸಕ್ತಿ ಗೆಹ್ಲೋಟ್ಗಿಲ್ಲ. ಅವರು ಕೇಂದ್ರದ ಮಾಜಿ ಸಚಿವ ಡಾ. ಸಿ.ಪಿ. ಜೋಶಿ ಅವರನ್ನು ಸಿಎಂ ಮಾಡುವುದಕ್ಕೆ ಆಸಕ್ತರಾಗಿದ್ದು, ಜೋಶಿ ಹೆಸರನ್ನೇ ಶಿಫಾರಸ್ಸು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ರಾಜಸ್ತಾನದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.