ಭೋಪಾಲ್, ಸೆ 23 (DaijiworldNews/DB): ಬಾಲಕಿಯರ ಶಾಲೆಯಲ್ಲಿ ಬಿಜೆಪಿಯ ಸಂಸದರೊಬ್ಬರು ಶೌಚಾಲಯವನ್ನು ಬರಿಗೈಯಿಂದ ಸ್ವಚ್ಛಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇವಾ ಪಖ್ವಾಡ ಅಡಿಯಲ್ಲಿ ಈ ಸ್ವಚ್ಚತಾ ಕಾರ್ಯ ನಡೆದಿದೆ.
ಮಧ್ಯಪ್ರದೇಶದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಲ್ಲಿ ಶೌಚಾಲಯ ಶುಚಿಗೊಳಿಸಿದವರು. ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ 'ಸೇವಾ ಪಖ್ವಾಡಾ'ದ ಭಾಗವಾಗಿ ಯುವ ಘಟಕವು ಬಾಲಕಿಯರ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯ ಹಮ್ಮಿಕೊಂಡಿತ್ತು. ಈ ವೇಳೆ ಜನಾರ್ದನ್ ಮಿಶ್ರಾ ಅವರೂ ಭೇಟಿ ನೀಡಿದ್ದು, ಶಾಲಾ ಶೌಚಾಲಯದಲ್ಲಿನ ಅಶುಚಿಯನ್ನು ಗಮನಿಸಿದ್ದಾರೆ. ಹೀಗಾಗಿ ಶೌಚಾಲಯವನ್ನು ಸ್ವಚ್ಚಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಶುಚಿತ್ವ ಕಾರ್ಯದ ವೀಡಿಯೋವನ್ನು ಸ್ವತಃ ಸಂಸದರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರವರೆಗೆ ಯುವ ಘಟಕದಿಂದ ಸೇವಾ ಪಖ್ವಾಡ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ.