ನಾಗ್ಪುರ್, ಸೆ 23 (DaijiworldNews/DB): ಅನೀಮಿಯಾದಿಂದ ಬಳಲುತ್ತಿರುವ ಬಾಲಕಿಯೊಬ್ಬಳ ಜೀವ ಉಳಿಸುವ ಸಲುವಾಗಿ ಅತ್ಯಂತ ವಿರಳ ರಕ್ತದ ಗುಂಪಿನ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಭೋಪಾಲ್ ನಿಂದ ನಾಗ್ಪುರಕ್ಕೆ ಸಂಚರಿಸಿ ರಕ್ತದಾನ ಮಾಡಿದ್ದಾರೆ.
ಗೊಂಡಿಯಾ ಗ್ರಾಮದ ಚಾಂದನಿ ಕುರ್ಸುಂಗೆ (17) ಎಂಬಾಕೆ ಅನೀಮಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಗೊಂಡಿಯಾ ಜಿಎಂಸಿಎಚ್ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಗೆ ಅಪರೂಪದ ಎ2ಬಿ ರಕ್ತದ ಮಾದರಿ ಅವಶ್ಯಕತೆಯಿದ್ದು, ಈ ಗುಂಪಿನ ದಾನಿಗಳಿಗಾಗಿ ಹಲವೆಡೆ ಸಂಪರ್ಕಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಬಾಲಕಿಯ ಕುರಿತು ಮಾಹಿತಿ ತಿಳಿದುಕೊಂಡ ಎಚ್ಡಿಎಫ್ಸಿ ಲೈಫ್ ಉದ್ಯೋಗಿ ಹಿತೇಶ್ ಅರೋರಾ ಅವರು ರಕ್ತದಾನ ಮಾಡಲು ನಿರ್ಧರಿಸಿದರು. ತಮ್ಮ ರಕ್ತದ ಗುಂಪು ಇದೇ ಮಾದರಿಯದ್ದಾಗಿದ್ದ ಕಾರಣ ಬಾಲಕಿಯ ಜೀವ ಉಳಿಸಲೆಂದು ಭೋಪಾಲ್ನಿಂದ ನಾಗ್ಪುರಕ್ಕೆ ರಾತ್ರೋರಾತ್ರಿ ಸಂಚರಿಸಿ ಬಾಲಕಿಗೆ ರಕ್ತದಾನ ಮಾಡಿದ್ದಾರೆ.
ಬಾಲಕಿಯ ಪರಿಸ್ಥಿತಿ ತಿಳಿದ ಹಿತೇಶ್ ರೈಲಿನಲ್ಲಿ ಪ್ರಯಾಣಿಸಿದ್ದು, ಅವರಿಗಾಗಿ ನಾಗ್ಪುರ್ ಸೇವಾ ಫೌಂಡೇಶನ್ ಪ್ರತಿನಿಧಿಗಳು ಕಾದು ಕುಳಿತಿದ್ದರು. ಅವರು ಆಗಮಿಸುತ್ತಿದ್ದಂತೆ ನೇರವಾಗಿ ಬಾಲಕಿಯಿರುವ ಆಸ್ಪತ್ರೆಗೆ ಕರೆದೊಯ್ದು ರಕ್ತದಾನಕ್ಕೆ ವ್ಯವಸ್ಥೆ ಮಾಡಿದ್ದರು. ರಕ್ತದಾನ ಮಾಡಿದ ಬಳಿಕ ಹಿತೇಶ್ ಭೋಪಾಲ್ಗೆ ಹಿಂತಿರುಗಿದರು. ಅವಶ್ಯಬಿದ್ದಲ್ಲಿ ಮತ್ತೆ ರಕ್ತದಾನ ಮಾಡುವುದಾಗಿ ಹಿತೇಶ್ ಹೇಳಿದ್ದಾರೆ. ಈ ಹಿಂದೆ ರೇವಾದ ಯುವತಿಯೋರ್ವಳಿಗೂ ಹಿತೇಶ್ ರಕ್ತ ನೀಡಿದ್ದರು.
ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ 0.6-1.4% ದಷ್ಟು ಮಂದಿಯಲ್ಲಿ ಮಾತ್ರ ಎ2ಬಿ ಮಾದರಿಯ ರಕ್ತದ ಗುಂಪು ಇದ್ದು, ಅತಿ ವಿರಳ ಮಾದರಿಯಾಗಿದೆ.