ಬೆಂಗಳೂರು, ಸೆ 23 (DaijiworldNews/MS): ಪ್ರಾಥಮಿಕ ಶಾಲಾ ಮಕ್ಕಳ ತೂಕ ಕಡಿಮೆ ಮಾಡಲು ಏನು ಕ್ರಮ ಕೈಗೊಂಡಿದ್ದೀರಿʼ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ತುಮಕೂರಿನವಕೀಲ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾ. ಅಲೋಕ್ ಅರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶಾಲಾ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಕಾನೂನು, ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವೂ ಆಗಾಗ್ಗೆ ಸೂಚನೆ, ಸುತ್ತೋಲೆಗಳನ್ನು ಹೊರಡಿಸುತ್ತಲೇ ಇರುತ್ತದೆ. ಆದರೆ, ಶಾಲಾ ಬ್ಯಾಗ್ ಸಂಬಂಧ ಯಾವುದೇ ನಿರ್ದಿಷ್ಟ ನಿಯಮವಿಲ್ಲ. 2006ರಲ್ಲಿ ರಾಜ್ಯಸಭೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿಗೊಳಿಸುವ ಕುರಿತಂತೆ ವಿಧೇಯಕವನ್ನು ಮಂಡಿಸಲಾಗಿತ್ತು. ಆದರೆ, ನಂತರ ಅದನ್ನು ಅಲ್ಲಿಗೆ ಕೈಬಿಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರದ ಶಾಲಾ ಬ್ಯಾಗ್ ನೀತಿ 2020ರಲ್ಲಿ ಮಕ್ಕಳ ಬ್ಯಾಗ್ ತೂಕದ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿದೆ. ಆದರೆ, ಆದು ಪಾಲನೆಯಾಗುತ್ತಿಲ್ಲ. ನಗರ ಅಥವಾ ಪಟ್ಟಣಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ತೂಕದ ಬ್ಯಾಗ್ಗಳನ್ನು ಹೊತ್ತು ಶಾಲೆಗೆ ಹೋಗುವುದು ಸಾಮಾನ್ಯವಾಗಿದೆ ಎಂದು ವಿವರಿಸಲಾಗಿದೆ.
ಆರೋಗ್ಯ, ತಜ್ಞರ ನಾನಾ ಅಧ್ಯಯನಗಳ ಪ್ರಕಾರ ಭಾರಿ ತೂಕದ ಶಾಲಾ ಬ್ಯಾಗ್ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬ್ಯಾಗ್ ಹೊರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಅವರ ಬೆನ್ನು ಮತ್ತು ಕಾಲಿಗೆ ಹಾನಿಯಾಗುತ್ತದೆ. ಹೀಗಾಗಿ, ಈ ಕುರಿತು ಸಂವಿಧಾನದ 21ನೇ ವಿಧಿಯ ಅಡಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.