ರಾಜಸ್ಥಾನ, ಸೆ 23 (DaijiworldNews/DB): ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ರಾಜಸ್ಥಾನದ 400ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ.
ಉತ್ತರಾಖಂಡದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೆ, ಜನಜೀವನವೂ ಅಸ್ತವ್ಯಸ್ಥಗೊಂಡಿದೆ. ಉತ್ತರಕಾಶಿ ಯಾತ್ರೆಗೆಂದು ತೆರಳಿದ್ದ ರಾಜಸ್ತಾನದ ಭಿಲ್ವಾರಾ, ಅಜ್ಮೀರ್ ಮತ್ತು ಇತರ ಸ್ಥಳಗಳ 400ಕ್ಕೂ ಹೆಚ್ಚು ಮಂದಿ ಯಾತ್ರಾರ್ಥಿಗಳು ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಯಾತ್ರಾರ್ಥಿಗಳು ಗಂಗೋತ್ರಿ ಧಾಮದಿಂದ ಹಿಂತಿರುಗುತ್ತಿದ್ದ ವೇಳೆ ಉತ್ತರಕಾಶಿಯ ಗಬ್ನಾನಿ ಬಳಿ ಭೂ ಕುಸಿತ ಸಂಭವಿಸಿತ್ತು. ಹೀಗಾಗಿ ಮುಂದೆ ಪ್ರಯಾಣ ಬೆಳೆಸಲಾಗದೆ ಅಲ್ಲೇ ಬಾಕಿಯಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು (ಎಸ್ಡಿಆರ್ಎಫ್) ಕಮಾಂಡೆಂಟ್ ರಾಜ್ಕುಮಾರ್ ಗುಪ್ತಾ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.