ಫಿರೋಜಾಬಾದ್, ಸೆ 23 (DaijiworldNews/DB): ಕಳಪೆ ಆಹಾರ ನೀಡುತ್ತಿರುವುದನ್ನು ವೀಡಿಯೋ ಮೂಲಕ ಕಣ್ಣೀರು ಹಾಕಿ ಸಾರ್ವಜನಿಕವಾಗಿ ಹೇಳಿದ್ದ ಫಿರೋಜಾಬಾದ್ನ ಪೊಲೀಸ್ ಪೇದೆಗೆ ಎತ್ತಂಗಡಿ ಶಿಕ್ಷೆ ನೀಡಲಾಗಿದೆ. ಫಿರೋಜಾಬಾದ್ನಿಂದ 600 ಕಿಲೋ ಮೀಟರ್ ದೂರದಲ್ಲಿರುವ ಗಾಜಿಪುರ ಜಿಲ್ಲೆಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಾನ್ಸ್ಟೇಬಲ್, ಅಲಿಗಢ್ ಜಿಲ್ಲೆಯ ಮನೋಜ್ ಕುಮಾರ್ (26) ವರ್ಗಾವಣೆಗೊಂಡ ಪೇದೆ. ಉತ್ತರಪ್ರದೇಶದ ಫಿರೋಜಾಬಾದ್ ಪೊಲೀಸ್ಲೈನ್ನಲ್ಲಿರುವ ಮೆಸ್ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಈ ಆಹಾರವನ್ನು ನಾಯಿಯೂ ತಿನ್ನಲಾರದು ಎಂದು ವೀಡಿಯೋ ಮುಖಾಂತರ ಕಾನ್ಸ್ಟೇಬಲ್ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 12 ಗಂಟೆಗಳ ನಿರಂತರ ಕರ್ತವ್ಯದಿಂದ ಹಸಿದು ಬಂದ ಕಾನ್ಸ್ಟೇಬಲ್ ಆಹಾರ ನೋಡಿ ಈ ರೀತಿ ಮಾತನಾಡಿದ್ದರು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಸುದೀರ್ಘ ರಜೆ ಮೇಲೆ ಕಳುಹಿಸಿಕೊಡಲಾಗಿತ್ತು. ಇದೀಗ ಗಾಜಿಪುರಕ್ಕೆ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ವಯಸ್ಸಾದ ಪೋಷಕರೊಂದಿಗೆ ಇಬ್ಬರು ಕಿರಿಯ ಸಹೋದರರು ಮತ್ತು ಓರ್ವ ಸಹೋದರಿ ನಮ್ಮ ಕುಟುಂಬದಲ್ಲಿದ್ದಾರೆ. ಪೋಷಕರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಂದ 600 ಕಿಮೀ ದೂರದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಿ ಅವರ ಆರೈಕೆ ಮಾಡುತ್ತಿದ್ದೇನೆ. ಶ್ರಮ ವಹಿಸಿ ಕೆಲಸ ಮಾಡಿದ ಬಳಿಕವೂ ಗುಣಮಟ್ಟದ ಆಹಾರ ನೀಡುವುದಿಲ್ಲ. ಈ ಆಹಾರವನ್ನು ನಾಯಿ ಕೂಡಾ ತಿನ್ನದು ಎಂದು ಕಣ್ಣೀರು ಹಾಕುತ್ತಾ ಮನೋಜ್ಕುಮಾರ್ ವೀಡಿಯೋದಲ್ಲಿ ವಿವರಿಸಿದ್ದರು.
ಈ ವೀಡಿಯೋ ವೈರಲ್ ಆದ ಕುರಿತಂತೆ ಇನ್ನು ಮನೋಜ್ ಅವರ ಪೊಲೀಸ್ ಸ್ನೇಹಿತರೊಬ್ಬರು ಪ್ರತಿಕ್ರಿಯಿಸಿ, ಮನೋಜ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಸಮಸ್ಯೆಯನ್ನು ಎತ್ತಿದ್ದಕ್ಕೆ ಅವರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಶಿಕ್ಷಣ ಮುಂದುವರಿಸಲು ಬಾಲ ಕಾರ್ಮಿಕರಾಗಿಯೂ ಅವರು ಕೆಲಸ ಮಾಡಿದ್ದರು. ಇಬ್ಬರು ಸಹೋದರರೂ ಕೆಲಸ ಮಾಡುತ್ತಿಲ್ಲ. ಒಬ್ಬ ವ್ಯಕ್ತಿಯ ದುಡಿಮೆಯಿಂದ ಕುಟುಂಬ ನಿರ್ವಹಣೆಯಾಗಬೇಕು ಎಂದಿದ್ದರು.