ಅಸ್ಸಾಂ, ಸೆ 23 (DaijiworldNews/DB): ನನ್ನ ಮರಣ ಪ್ರಮಾಣಪತ್ರ ಕಳೆದುಹೋಗಿದೆ ಎಂದು ವ್ಯಕ್ತಿಯೊಬ್ಬ ಪತ್ರಿಕಾ ಜಾಹೀರಾತು ನೀಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಸ್ಸಾಂನ ಲುಮ್ಮಿಂಗ್ ಬಜಾರ್ನಲ್ಲಿ ಸೆಪ್ಟಂಬರ್ 7ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ರಂಜಿತ್ಕುಮಾರ್ ಎಂಬ ಹೆಸರಿನ ವ್ಯಕ್ತಿ ಪತ್ರಿಕಾ ಜಾಹೀರಾತು ನೀಡಿದ್ದಾನೆ. ಅಲ್ಲದೆ ಅದರಲ್ಲಿ ನೋಂದಣಿ ಮತ್ತು ಪ್ರಮಾಣಪತ್ರದ ಕ್ರಮಸಂಖ್ಯೆಯನ್ನೂ ನಮೂದು ಮಾಡಲಾಗಿದೆ. ವ್ಯಕ್ತಿ ಸತ್ತಾಗ ಮಾತ್ರ ಮರಣಪ್ರಮಾಣ ಪತ್ರ ದಾಖಲೆ ಮಾಡಲಾಗುತ್ತದೆ. ಆದರೆ ಜೀವಂತ ವ್ಯಕ್ತಿಯ ಮರಣಪ್ರಮಾಣಪತ್ರ ಮಾಡಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಈ ಜಾಹೀರಾತನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಜಾಹೀರಾತು ಕುರಿತಂತೆ ಸಾಮಾಜಿಕ ಜಾಲತಾಣ ಬಳಕೆದಾರರು ತಮಾಷೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಕಳೆದು ಹೋದ ಪ್ರಮಾಣಪತ್ರ ಸಿಕ್ಕರೆ ಅದನ್ನು ಎಲ್ಲಿಗೆ ತಲುಪಿಸಬೇಕು ಎಂದು ಒಬ್ಬ ಪ್ರಶ್ನಿಸಿದರೆ, ಸ್ವರ್ಗಕ್ಕೆ ಅಥವಾ ನರಕಕ್ಕೆ ಕಳುಹಿಸಬೇಕಾ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಪ್ರಮಾಣಪತ್ರ ಸಿಕ್ಕಿದರೆ ಕೂಡಲೇ ಅವರಿಗೆ ತಲುಪಿಸಿಬಿಡಿ, ಇಲ್ಲವಾದರೆ ದೆವ್ವ ಕೋಪಗೊಳ್ಳಬಹುದು ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.