ಹಾವೇರಿ, ಸೆ 23 (DaijiworldNews/DB): 11 ಮಕ್ಕಳನ್ನು ಹೆತ್ತು, ಹೊತ್ತು, ಸಲಹಿದ ತಾಯಿಯೊಬ್ಬರು ಈಗ ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಬೀದಿಯಲ್ಲಿ ಕಣ್ಣೀರಿಡುತ್ತಿರುವ ಕರುಳು ಹಿಂಡುವ ದೃಶ್ಯ ಹಾವೇರಿಯಲ್ಲಿ ಕಂಡು ಬಂದಿದೆ.
ಈಕೆ ಹೆಸರು ಪುಟ್ಟವ್ವ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನವರು. 78 ವರ್ಷದ ಈ ವೃದ್ದೆ 11 ಮಕ್ಕಳನ್ನು ಹೆತ್ತು ಹೊತ್ತು, ಬೆಳೆಸಿದ್ದಾರೆ. ಆದರೆ ಹನ್ನೊಂದು ಮಕ್ಕಳೂ ಹೆತ್ತ ತಾಯಿಯನ್ನು ಮನೆಗೆ ಸೇರಿಸಿಕೊಳ್ಳದೆ ಬೀದಿಗೆ ಬಿಟ್ಟಿದ್ದಾರೆ.
ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ವೃದ್ದೆ ಇದೀಗ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲು ಹಾವೇರಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಮಕ್ಕಳು ತನ್ನನ್ನು ನೋಡಿಕೊಳ್ಳದ ಕಾರಣ ನನ್ನ ಯಜಮಾನನಿಗೆ ಸೇರಬೇಕಾದ ಆಸ್ತಿಯನ್ನು ನನಗೆ ನೀಡಿ ಎಂದರೂ ಯಾರೂ ಆಕೆಯ ಮಾತಿಗೆ ಬೆಲೆ ಕೊಟ್ಟಿಲ್ಲ. ಹೀಗಾಗಿ ದಯಾಮರಣಕ್ಕೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಕಣ್ಣೀರಿಡುತ್ತಿದ್ದಾರೆ.
ಹನ್ನೊಂದು ಮಕ್ಕಳ ಪೈಕಿ ಏಳು ಮಂದಿ ಗಂಡು ಮಕ್ಕಳಿದ್ದು, ಏಳು ಮಂದಿಯೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 25 ಎಕರೆ ಜಮೀನು ಕೂಡಾ ಇದೆ. ಆದರೆ ಯಾರೂ ಅಮ್ಮನನ್ನು ಮನೆಗೆ ಕರೆದೊಯ್ಯುತ್ತಿಲ್ಲ. ಪತಿ ಹೆಸರಿಗಿರುವ ಆಸ್ತಿಯನ್ನೂ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಈ ವೃದ್ದೆಯ ಮಕ್ಕಳು ಬಿಡುತ್ತಿಲ್ಲ. ಇನ್ನು ನಾಲ್ವರು ಹೆಣ್ಣು ಮಕ್ಕಳ ಬಳಿ ಹೋದರೆ ನಮ್ಮ ಮನೆಗೆ ಬರಬೇಡ ಎಂದು ದೂರ ಸರಿಸುತ್ತಿದ್ದಾರೆ. ಕಿರಿ ಮಗ ಗೋವಿಂದ್ ನನ್ನನ್ನು ನೋಡಿಕೊಳ್ಳಲು ಮುಂದಾದರೂ, ಉಳಿದವರು ಬಿಡುತ್ತಿಲ್ಲ ಎಂದು ವೃದ್ದೆ ಕಣ್ಣೀರು ಹಾಕುತ್ತಿದ್ದಾರೆ.
ವೃದ್ದೆಯ ಕುರಿತು ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆಶು ನದಾಫ್, ಇಷ್ಟಪಟ್ಟಲ್ಲಿ ವೃದ್ದಾಶ್ರಮಕ್ಕೆ ಸೇರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ನ್ಯಾಯ ದೊರಕಿಸಿಕೊಡುವುದಾಗಿಯೂ ಅಜ್ಜಿಯನ್ನು ಸಮಾಧಾನ ಪಡಿಸಿದರು.