ನವದೆಹಲಿ, ಸೆ 23 (DaijiworldNews/DB): ಮದುಮಗಳೊಬ್ಬಳು ರಸ್ತೆಗುಂಡಿ ನಡುವೆ ವೆಡ್ಡಿಂಗ್ ಫೋಟೋಶೂಟ್ ಮಾಡಿದ ಫೋಟೋಗಳು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಇಲ್ಲೊಬ್ಬ ಮದುಮಗಳು ಜಿಮ್ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿ ಟ್ರೆಂಡ್ ಸೃಷ್ಟಿಸಿದ್ದಾಳೆ.
ಸದ್ಯ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಳು ಟ್ರೆಂಡ್ನಲ್ಲಿದೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡಿಸಿಕೊಂಡು ವಧು-ವರರು ಗಮನ ಸೆಳೆಯುತ್ತಾರೆ. ಅಂತಹುದೇ ಒಂದು ವೆಡ್ಡಿಂಗ್ ಫೋಟೋಶೂಟ್ ಸದ್ಯ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗಿದೆ. ಇಲ್ಲಿ ಮದುಮಗಳು ಕಾಂಜೀವರಂ ಸೀರೆಯುಟ್ಟು ಮದುಮಗಳ ಅಲಂಕಾರದೊಂದಿಗೆ ಜಿಮ್ಗೆ ಆಗಮಿಸಿ ವರ್ಕೌಟ್ ಮಾಡುತ್ತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ.
ಸೀರೆಯುಟ್ಟು ವರ್ಕೌಟ್ ಮಾಡುತ್ತಿರುವ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ವಧುವಿನ ಫೋಟೋ ಕಾನ್ಸೆಪ್ಟ್ಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಟ್ವಿಟರ್ನಲ್ಲಿ ಈ ವೀಡಿಯೋವನ್ನು 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಕೇರಳದ ವಧುವೊಬ್ಬಳು ರಸ್ತೆ ಗುಂಡಿ ನಡುವೆ ಮದುವೆ ಧಿರಿಸಿನಲ್ಲೇ, ಮಧುಮಗಳ ಅಲಂಕಾರ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಆಡಳಿತ ವರ್ಗವನ್ನು ಎಚ್ಚರಿಸುವ ಕೆಲಸವನ್ನು ವಿಭಿನ್ನವಾಗಿ ಮಾಡಿದ್ದಳು.