ಭೋಪಾಲ್, ಸೆ 23 (DaijiworldNews/DB): ಲೈಂಗಿಕ ಕಿರುಕುಳ ನೀಡಿ ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬ ಬಾಲಕನನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ.
15 ವರ್ಷದ ಬಾಲಕ ಹತ್ಯೆಯಾಗಿದ್ದು, ಮೇಕಪ್ ಕಲಾವಿದನಾಗಿದ್ದ 20 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಆತ್ಮಹತ್ಯೆಗೂ ಮುನ್ನ ಚೀಟಿಯೊಂದನ್ನು ಬರೆದಿಟ್ಟಿದ್ದು, ಅದರಲ್ಲಿ ಹದಿನೈದು ವರ್ಷದ ಬಾಲಕ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ಬ್ಲಾಕ್ಮೇಲ್ ಮಾಡುತ್ತಿದ್ದಾ ಎಂದು ಬರೆದಿದ್ದಾನೆ. ಬಳಿಕ ಮುಚ್ಚಿದ ಫ್ಯಾಕ್ಟರಿಯೊಂದರ ಜಾಗದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗುವ ಮುನ್ನ ವ್ಯಕ್ತಿಯು ಈತನನ್ನು ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ವ್ಯಕ್ತಿಯು ತನ್ನ ಮನೆಯಲ್ಲೇ ಬುಧವಾರ ನೇಣಿಗೆ ಶರಣಾಗಿದ್ದಾನೆ. ಅಲ್ಲದೆ ಮನೆಯಲ್ಲಿ ಪತ್ತೆಯಾಗಿರುವ ಡೆತ್ನೋಟ್ನಲ್ಲಿ ಬಾಲಕನ ವಿರುದ್ದ ಆರೋಪ ಹೊರಿಸಿರುವುದಲ್ಲದೇ, ನಾನು ತುಂಬಾ ಆಘಾತಗೊಂಡಿದ್ದೇನೆ. ಆದರೆ ಇದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಆತ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೇ, ದುಬಾರಿ ಉಡುಗೊರೆಗಳನ್ನು ನೀಡಬೇಕೆಂದು ಬೇಡಿಕೆ ಇಡುತ್ತಿದ್ದ. ನೀಡದೇ ಇದ್ದಲ್ಲಿ ಪರಿಣಾಮ ಗಂಭೀರವಾಗಿರಲಿದೆ ಎಂದು ಹೆದರಿಸುತ್ತಿದ್ದ ಎಂದೂ ಉಲ್ಲೇಖಿಸಿದ್ದಾನೆ.
ನನಗೆ ಸಮಾಜದ ಭಯ ಕಾಡುತ್ತಿತ್ತು. ಹೀಗಾಗಿ ಆತನಿಗೆ ಎಲೆಕ್ಟ್ರಾನಿಕ್ ಸಾಧನ ಹಾಗೂ ದುಬಾರಿ ಸೈಕಲ್ನ್ನೂ ಕೊಡಿಸಿದ್ದೆ. ಆದರೆ ನನ್ನ ಪರಿಸ್ಥಿತಿ ಸಂಕಷ್ಟಮಯವಾಗಿತ್ತು. ಹೀಗಾಗಿ ಸೇಡು ತೀರಿಸಿಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾನೆ. 20 ವರ್ಷದ ವ್ಯಕ್ತಿ ವಿರುದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.