ಲಕ್ನೋ,ಸೆ 23 (DaijiworldNews/MS): ವಾರಾಣಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದಲ್ಲಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು 'ಕಾರ್ಬನ್ ಡೇಟಿಂಗ್' ಪರೀಕ್ಷೆಗೆ ಒಳಪಡಿಸಬೇಕೆಂದು ಹಿಂದೂ ಸಮುದಾಯದ ಅರ್ಜಿದಾರರು ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಮನವಿ ಮಾಡಿದ್ದಾರೆ.
ಮೇ 16 ರಂದು ವಕೀಲ ಕಮಿಷನರ್ ಸಮೀಕ್ಷೆಯಲ್ಲಿ ಕಂಡುಬಂದ ಶಿವಲಿಂಗದ ಸ್ವರೂಪ, ವಯಸ್ಸು ಮತ್ತು ಅಂಶಗಳನ್ನು ನಿರ್ಧರಿಸಲು ವೈಜ್ಞಾನಿಕ ತನಿಖೆ ಮತ್ತು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲು ತಮಗೆ ಇನ್ನೂ ಕಾಲಾವಕಾಶ ಬೇಕಿದೆ. ಹೀಗಾಗಿ ವಿಚಾರಣೆಯನ್ನು ಇನ್ನೂ ಎಂಟು ವಾರಗಳ ಕಾಲ ಮುಂದೂಡಬೇಕೆಂದು ಮುಸ್ಲಿಂ ಸಮುದಾಯದ ಅರ್ಜಿದಾರರು ಕೋರಿದ್ದಾರೆ.
ಉಭಯ ಅರ್ಜಿದಾರರ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರ ವಾದ ಆಲಿಸಿದ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ ಅವರು ಮುಸ್ಲಿಂ ಸಮುದಾಯದ ಅರ್ಜಿದಾರರಿಗೆ ನೋಟಿಸ್ ನೀಡಿದರು. ಬಳಿಕ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದ್ದಾರೆ.
ಈ ಹಿಂದೆ, ಅರ್ಜಿದಾರರು ಇದೇ ಮನವಿಯನ್ನು ಸುಪ್ರೀಂ ಕೋರ್ಟ್ ಸಲ್ಲಿಸಿದ್ದರು ಮತ್ತು ಈ ವಿಷಯವನ್ನು ವಾರಣಾಸಿಯ ವಿಚಾರಣಾ ನ್ಯಾಯಾಲಯಕ್ಕೆಸಲ್ಲಿಸುವಂತೆ ನಿರ್ದೇಶಿಸಿತ್ತು.