ಕೊಯಮತ್ತೂರು, ಸೆ 23 (DaijiworldNews/MS): ತಮಿಳುನಾಡಿನ ಕೊಯಮತ್ತೂರಿನ ಬಿಜೆಪಿ ಕಚೇರಿ ಆವರಣ ಮೇಲೆ ಗುರುವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದ್ದು ಸ್ಥಳದಲ್ಲಿ ಉದ್ವಿಗ್ನತೆಯನ್ನು ಉಂಟಾದ ವರದಿಯಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಪಿಎಫ್ಐಕಚೇರಿ ಮತ್ತು ಅದರ ಪದಾಧಿಕಾರಿಗಳ ನಿವಾಸಗಳ ಮೇಲೆ ಎನ್ಐಎ ದಾಳಿ ನಡೆಸಿದ ಗಂಟೆಗಳ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.
ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಿರುವ ದೃಶ್ಯಾವಳಿಗಳು ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆಟ್ರೋಲ್ ತುಂಬಿದ ಬಾಟಲಿಯು ಪಕ್ಷದ ಕಚೇರಿ ಕಟ್ಟಡದ ಕೆಳಗೆ ಬಿದ್ದಿದೆ. ಹೀಗಾಗಿ ಅಲ್ಲಿ ನಿಂತಿದ್ದ ಪಕ್ಷದ ಕಾರ್ಯಕರ್ತರು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಇದರ ಬೆನ್ನಲ್ಲೇ, ಮತ್ತೊಂದು ಹಿಂದೂ ಮುನ್ನಾನಿ ಕಾರ್ಯಕಾರಿ ಒಡೆತನದ ಸಗಟು ಬಟ್ಟೆ ಅಂಗಡಿಯ ಮೇಲೆ ಹೊತ್ತಿಸಿದ ಬಾಂಬ್ ಅನ್ನು ಎಸೆಯಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೇಲಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ, ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೊಯಮತ್ತೂರು ಪೊಲೀಸರು ಎರಡೂ ಘಟನೆಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.