ನವದೆಹಲಿ, ಸೆ 22 (DaijiworldNews/DB): ವಾಟ್ಸಪ್ ಪೇ ಇಂಡಿಯಾದ ಮುಖ್ಯಸ್ಥ ಮನೇಶ್ ಮಹಾತ್ಮೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2021ರ ಏಪ್ರಿಲ್ನಲ್ಲಿ ವಾಟ್ಸಾಪ್ ಪೇಗೆ ಮುಖ್ಯಸ್ಥನಾಗಿ ಸೇರಿದ್ದ ಮನೇಶ್ 18 ತಿಂಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಂದೆ ಸೇವೆ ಸಲ್ಲಿಸಿದ್ದ ಅಮೆಜಾನ್ ಪೇ ಇಂಡಿಯಾಗೇ ಮತ್ತೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅವರು ಈ ಹಿಂದೆ ಏಳು ವರ್ಷ ಕಾಲ ಅಮೆಜಾನ್ ಪೇ ಇಂಡಿಯಾದ ನಿರ್ದೇಶಕ ಮತ್ತು ಮಂಡಳಿ ಸದಸ್ಯರಾಗಿದ್ದರು. ಆಂತರಿಕ ಮತ್ತು ಬಾಹ್ಯವಾಗಿ ಕಂಪೆನಿಯ ಪಾವತಿ ಅನುಭವ ಅಭಿವೃದ್ದಿಪಡಿಸುವಲ್ಲಿ ಹಿರಿಯ ಉತ್ಪನ್ನ ಎಂಜಿನಿಯರಿಂಗ್, ವ್ಯವಹಾರ ಅಭಿವೃದ್ದಿ ಮತ್ತು ಮಾರಾಟ ನಾಯಕರ ತಂಡ ಪ್ರತಿನಿಧಿಸಿ ಕಂಪೆನಿ ಉತ್ಕೃಷ್ಟ ಮಟ್ಟಕ್ಕೇರುವಲ್ಲಿ ಶ್ರಮಿಸಿದ್ದರು. ಏಳು ವರ್ಷಗಳ ಸುದೀರ್ಘ ಸೇವೆ ಬಳಿಕ ವಾಟ್ಸಾಪ್ ಪೇ ಇಂಡಿಯಾಕ್ಕೆ ಸೇರಿದ್ದರು.