ಬೆಂಗಳೂರು, ಸೆ 22 (DaijiworldNews/DB): ಪೇ ಸಿಎಂ ಪೋಸ್ಟರ್ ವಿಚಾರವು ವಿಧಾನ ಪರಿಷತ್ ಕಲಾಪದಲ್ಲಿಂದು ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಬಿಜೆಪಿ ಸದಸ್ಯರು ಪೋಸ್ಟರ್ ಪ್ರದರ್ಶಿಸಿ ಸದನದಲ್ಲಿ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ ಪೋಸ್ಟರ್ ಹಿಡಿದು ಪ್ರತಿಭಟಿಸಿದರು. ಹೀಗಾಗಿ ಸದನದಲ್ಲಿ ಎರಡೂ ಪಕ್ಷಗಳ ನಡುವೆ ತೀವ್ರ ಕೋಲಾಹಲ ಸೃಷ್ಟಿಯಾಯಿತು. ಇದರೊಂದಿಗೆ ಬಿಜೆಪಿ ಸದಸ್ಯರು ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳ ಪೋಸ್ಟರ್ನ್ನು ಪ್ರದರ್ಶಿಸಿದರು. ಅಲ್ಲದೆ ಭ್ರಷ್ಟ ಕಾಂಗ್ರೆಸ್ಗೆ ಧಿಕ್ಕಾರ ಎಂಬುದಾಗಿ ಘೋಷಣೆ ಕೂಗಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾವಚಿತ್ರವನ್ನು ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು ಈಗ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾತ್ರ ಕ್ರಮ ಕೈಗೊಂಡಿರುವುದೇಕೆ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಸರ್ಕಾರದ ವಿರುದ್ದ ಫಲಕ ಹಿಡಿದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಸದಸ್ಯರು ಕೂಡಾ ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಗದ್ದಲ ಇನ್ನಷ್ಟು ಹೆಚ್ಚಾಯಿತು. ಹೀಗಾಗಿ ಸಭಾಪತಿ ಪೀಠದ ರಕ್ಷಣೆಗೆ ಮಾರ್ಷಲ್ಗಳು ಬಂದಿದ್ದು, ಬಳಿಕ ಮಧ್ಯಾಹ್ನ 3 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು ಎಂದು ತಿಳಿದು ಬಂದಿದೆ.
ಪೇ ಸಿಎಂ ಪೋಸ್ಟರ್ನ್ನು ಬೆಂಗಳೂರಿನ ಹಲವೆಡೆ ಅಂಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರನ್ನು ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದು, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಇದೇ ವೇಳೆ ಆಗ್ರಹಿಸಿದರು.