ಅಮರಾವತಿ, ಸೆ 22 (DaijiworldNews/DB): ಎನ್ಟಿಆರ್ ಆರೋಗ್ಯ ವಿಶ್ವವಿದ್ಯಾಲಯಕ್ಕೆ ತಂದೆ, ದಿ. ಮಾಜಿ ಮುಖ್ಯಮಂತ್ರಿ ಡಾ. ವೈ. ಎಸ್. ರಾಜಶೇಖರ್ ರೆಡ್ಡಿ ಅವರ ಹೆಸರನ್ನು ಮರು ನಾಮಕರಣ ಮಾಡುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನಿರ್ಧಾರವು ಆಂಧ್ರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯಿತು.
ಜಗನ್ ನಿರ್ಧಾರ ವಿರೋಧಿಸಿ ತೆಲುಗು ದೇಶಂ ಪಕ್ಷ ಬುಧವಾರ ದಿನವಿಡೀ ಸದನದಲ್ಲಿ ಗದ್ದಲ ಸೃಷ್ಟಿಸಿತು. ಆರೋಗ್ಯ ಸಚಿವ ವಿಡದಾಳ ರಜಿನಿ ಅವರು ಸದನದಲ್ಲಿ ಮಸೂದೆಯನ್ನು ಮಂಡಿಸುತ್ತಿದ್ದಂತೆ ಟಿಡಿಪಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಟಿಡಿಪಿ ಸದಸ್ಯರಿಗೆ ಅಭಿಪ್ರಾಯ ವ್ಯಕ್ತಪಡಿಸಲು ವಿಧಾನಸಭಾಧ್ಯಕ್ಷ ತಮ್ಮಿನೇನಿ ಸೀತಾರಾಂ ಅವರು ಅವಕಾಶ ಕಲ್ಪಿಸಿದರೂ, ಟಿಡಿಪಿ ಸದಸ್ಯರು ಸಭಾಧ್ಯಕ್ಷರ ವೇದಿಕೆಗೆ ಮುತ್ತಿಗೆ ಹಾಕಿ ಮಸೂದೆ ಪ್ರತಿ ಹರಿದು ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ ಮಸೂದೆ ಹಿಂತೆಗೆತಕ್ಕೆ ಆಗ್ರಹಿಸಿದರು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಟಿಡಿಪಿ ಸದಸ್ಯರನ್ನು ಅಮಾನತು ಮಾಡಲಾಯಿತು.
ಕೊನೆಗೆ ಪರ-ವಿರೋಧಗಳ ನಡುವೆಯೇ ಎನ್ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರನ್ನು ಡಾ ವೈಎಸ್ಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಎಂದು ಬದಲಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆಯು ಅಂಗೀಕರಿಸಿತು.
ಮಸೂದೆ ಮಂಡನೆಯಾದ ಕೂಡಲೇ ವಿಜಯವಾಡದಲ್ಲಿ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಲ್ಲದೆ, ವಿವಿ ಬಳಿ ಧರಣಿ ನಡೆಸಿ, ರಸ್ತೆ ತಡೆ ಮಾಡಿದರು. ಹೀಗಾಗಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ವಿವಿಗೆ ತಮ್ಮ ತಂದೆಯ ಹೆಸರನ್ನು ಮರುನಾಮಕರಣ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿಎಂ ಜಗನ್ಮೋಹನ್ ರೆಡ್ಡಿ, ಆಂಧ್ರಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ವೈಎಸ್ಆರ್ ಅವರು ಪ್ರವರ್ತಕರಾಗಿದ್ದರು. ಅದಕ್ಕಾಗಿ ಅವರಿಗೆ ನೀಡುವ ಗೌರವ ಇದಾಗಿದೆ. ಹೆಸರು ಮರು ನಾಮಕರಣ ಮಾಡುವುದರಿಂದ ಎನ್ಟಿಆರ್ಗೆ ಗೌರವ ಇಲ್ಲದಾಗಿದೆ ಎಂದರ್ಥವಲ್ಲ ಎಂದರು.