ಬೆಂಗಳೂರು, ಸೆ 22 (DaijiworldNews/DB): ಲಂಚವಾಗಿ ಪಡೆದ ಹಣವನ್ನು ಹಿಂತಿರುಗಿಸುವ ವೇಳೆ ಕೆಎಎಸ್ ಅಧಿಕಾರಿಯ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿರುವ ಅಪರೂಪದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಎ.ಬಿ. ವಿಜಯಕುಮಾರ್ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್ ಬಂಧಿತರು. ಭೂಸ್ವಾಧೀನಕ್ಕಾಗಿ ಎನ್ಒಸಿ ಪತ್ರ ನೀಡಲು ಭಗತ್ ಸಿಂಗ್ ಅರುಣ್ ಎಂಬವರಿಂದ ವಿಜಯಕುಮಾರ್ ಅವರು 2.5 ಲಕ್ಷ ರೂ. ಲಂಚ ಪಡೆದಿದ್ದರು. ಆದರೆ ಈ ಸಂಬಂಧ ಭಗತ್ ಸಿಂಗ್ ಅರುಣ್ ಅವರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕೆಐಎಡಿಬಿ ಉಪ ಆಯುಕ್ತರು ತನಿಖೆ ಆರಂಭಿಸಿದ್ದರು. ಇದು ಗೊತ್ತಾಗುತ್ತಿದ್ದಂತೆ ಆರೋಪಿಗಳು ಭಗತ್ ಸಿಂಗ್ ಅವರಿಗೆ ಕರೆ ಮಾಡಿ ದೂರು ಹಿಂಪಡೆದರೆ 2.5 ಲಕ್ಷ ರೂ.ಗಳಿಗೆ 50 ಸಾವಿರ ರೂ. ಸೇರಿಸಿ ವಾಪಾಸ್ ನೀಡುವುದಾಗಿ ಆಮಿಷ ಒಡ್ಡಿದ್ದರು. ಬಳಿಕ ದೂರುದಾರರಿಗೆ ಹಣವನ್ನು ಹಿಂತಿರುಗಿಸಿದ್ದರು.
ಹಣ ಹಿಂತಿರುಗಿಸುತ್ತಿದ್ದ ವೇಳೆ ಆಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ಲಂಚ ಪಡೆದುಕೊಳ್ಳುವಾಗ ಬಂಧನಕ್ಕೊಳಪಡುವ ವಿದ್ಯಾಮಾನಗಳು ಆಗಾಗ ಘಟಿಸುತ್ತವೆ. ಆದರೆ ಲಂಚದ ಹಣವನ್ನು ಹಿಂತಿರುಗಿಸಿದ ವೇಳೆ ಬಂಧನಕ್ಕೊಳಗಾದ ಅಪರೂಪದ ಪ್ರಸಂಗ ಇದಾಗಿದೆ.