ರಾಜಸ್ಥಾನ, ಸೆ 22 (DaijiworldNews/DB): ಮಹಿಳೆಯೊಬ್ಬಳು ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಆಕೆಯ ನಾಲ್ಕನೇ ಪತಿಯಿಂದ ಕೊಲೆಯಾದ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಪುಷ್ಪಕ್ ಬ್ಲಾಕ್ನ ದಿಯೋಘರ್ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಖಾನ್ಪುರದ ಕಾಂತ ದೇವಿ ಎಂದು ಗುರುತಿಸಲಾಗಿದೆ. ತನ್ನ ಪುತ್ರಿ ಸೇತು ಸಿಂಗ್ ಎಂಬಾತನನ್ನು ಮದುವೆಯಾಗಿದ್ದು, ಆತನೇ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ತಂದೆ ಚೋಟು ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿ ಓರ್ವ ಮಹಿಳೆ, ಮೃತಳ ಪತಿ, ಮತ್ತು ಅಟೋ ಚಾಲಕನನ್ನುರಾಜಸ್ಥಾನದ ಅಜ್ಮೀರ್ನ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 17 ರಂದು ಹೊಸ ಬೈಪಾಸ್ ರಸ್ತೆಯ ಕಾಡಿನಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಬಳಿಕ ಅಲ್ಲಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಸೇತು ಸಿಂಗ್ನನ್ನು ಪ್ರಶ್ನಿಸಿದಾಗ ಸೆಪ್ಟೆಂಬರ್ 17ರಂದು ಮಕರವಾಲಿ ಗ್ರಾಮದಲ್ಲಿ ಪತ್ನಿಯೊಂದಿಗೆ ಆಟೋದಲ್ಲಿ ಕುಳಿತಿದ್ದಾಗ ನಡೆದ ಗಲಾಟೆ ವಿಕೋಪಕ್ಕೆ ಹೋಗಿತ್ತು. ಅದೇ ಕೋಪದಲ್ಲಿ ಪತ್ನಿಯನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಅಟೋ ಚಾಠಲಕ ಖೇಮ್ ಸಿಂಗ್ ಮತ್ತು ಆತನ ಗೆಳತಿ ರೇಣು ಶವವನ್ನು ಕಾಡಿನಲ್ಲಿ ಎಸೆದಿದ್ದರು ಎಂದು ಬಾಯ್ಬಿಟ್ಟಿದ್ದಾನೆ.
ಸೇತು ಮತ್ತು ಕಾಂತಾ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಆತ ಆಕೆಗೆ ನಾಲ್ಕನೇ ಪತಿಯಾಗಿದ್ದ. ಸೆಪ್ಟೆಂಬರ್ 17 ರಂದು ಜೋಧ್ಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೇತು ಕಾಂತಾಳನ್ನು ಕರೆದೊಯ್ಯಲು ಖೇಮ್ ಸಿಂಗ್ನ ಆಟೋದಲ್ಲಿ ಬಂದಿದ್ದ. ಈ ವೇಳೆ ಆಕೆಗೆ ಪದೇ ಪದೇ ಕರೆ ಬರುತ್ತಿದ್ದುದರಿಂದ ಆಕೆಗೆ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.