ಬೆಂಗಳೂರು, ಸೆ 22 (DaijiworldNews/DB): ರಾಜ್ಯಾದ್ಯಂತ ಎಲ್ಲಾ ಖಾಸಗಿ ಶಾಲೆಗಳು ಪ್ರತಿದಿನ ಐದೂವರೆ ಗಂಟೆ ಕಾಲ ಮತ್ತು ಶನಿವಾರ ಅರ್ಧ ದಿನ ಶಾಲೆ ನಡೆಸುವಂತೆ ಸೂಚಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಅದರಡಿ ರಚಿಸಲಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ಪಠ್ಯಕ್ರಮ, ನಿಯಂತ್ರಣ ಮತ್ತು ಇತರೆ ಕಾಯ್ದೆ-1995ರಲ್ಲಿ ನಿಯಮಗಳನ್ನು ಜಾರಿಗೊಳಿಸಿಲಾಗಿದೆ. ಈ ನಿಯಮಾನುಸಾರ ಪ್ರತಿ ದಿನ ಐದೂವರೆ ಗಂಟೆ ಶಾಲೆಗಳನ್ನು ನಡೆಸುವುದು ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿ ಸರ್ಕಾರದಿಂದ ನೋಂದಣಿ ಮತ್ತು ಮಾನ್ಯತೆ ಪಡೆದ ಕೆಲವು ಖಾಸಗಿ ಶಾಲೆಗಳು ಈ ನಿಯಮಗಳನ್ನು ಉಲ್ಲಂಘಿಸಿ ತಮ್ಮಿಚ್ಚೆಯಂತೆ ಶಾಲೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಪೋಷಕರು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಈ ಸಂಬಂಧ ದೂರುಗಳು ಬರುತ್ತಿದ್ದು, ದೂರು ಪರಿಶೀಲನೆಗೆ ಬಿಇಓ, ಬಿಆರ್ಪಿ ಮತ್ತು ಸಿಆರ್ಪಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ ಕಡ್ಡಾಯ ಸೂಚನೆ ಹೊರಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರಕ್ಕೆ ಸೀಮಿತಗೊಳಿಸಿ ಪ್ರಸ್ತುತ ಬೆಳಗ್ಗೆ 8ರಿಂದ 8.30ರೊಳಗೆ ಶಾಲೆ ಆರಂಭ ಮಾಡಬೇಕು. ಪ್ರಾರ್ಥನೆಗೆ 10 ನಿಮಿಷ, ಮಧ್ಯಾಹ್ನದ ಉಪಹಾರಕ್ಕೆ 30ರಿಂದ 40 ನಿಮಿಷ ಹೊರತುಪಡಿಸಿ ಉಳಿದಂತೆ ಐದೂವರೆ ಗಂಟೆ ಶಾಲೆ ನಡೆಸುವುದು ಕಡ್ಡಾಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.
ಅನುಮತಿ ಪಡೆದಿರುವ ಮಾಧ್ಯಮ/ಪಠ್ಯಕ್ರಮದಲ್ಲಿ ಭೋಧಿಸದೆ ನಿಯಮ ಉಲ್ಲಂಘಿಸುತ್ತಿರುವ ಕುರಿತಾಗಿಯೂ ಕೆಲವು ಖಾಸಗಿ ಶಾಲೆಗಳ ಮೇಲೆ ದೂರುಗಳು ಬಂದಿವೆ. ಇದು ಮುಖ್ಯಮಂತ್ರಿಗಳ ಅಸಮಾಧಾನಕ್ಕೂ ಕಾರಣವಾಗಿದ್ದು, ಮುಂದೆ ಈ ರೀತಿಯ ಉಲ್ಲಂಘನೆಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ಇಲಾಖೆ ಕ್ರಮ ಜರಗಿಸಲಿದೆ ಎಂದಿದೆ.
ಶಾಲೆಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ನಿರ್ವಹಿಸಲು ಕೆಲವು ಬಿಆರ್ಪಿ/ಸಿಆರ್ಪಿಗಳು ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದಿದ್ದು, ಪರಿಶೀಲನೆಯಲ್ಲಿ ಇದು ಸ್ಪಷ್ಟವಾದಲ್ಲಿ ಹುದ್ದೆ ರದ್ದುಪಡಿಸಲಾಗುವುದು ಮತ್ತು ಶಿಕ್ಷಕರಾಗಿಯೇ ಮುಂದುವರಿಯಬೇಕಾಗುತ್ತದೆ ಎಂದು ಇದೇ ವೇಳೆ ಇಲಾಖೆ ಎಚ್ಚರಿಕೆ ನೀಡಿದೆ.