ಬೆಂಗಳೂರು, ಸೆ 21 (DaijiworldNews/SM): ಕಾಂಗ್ರೆಸ್ ಪೇ ಸಿಎಂ ಅಭಿಯಾನ ನನ್ನ ಮತ್ತು ರಾಜ್ಯದ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಪೇ ಸಿಎಂ ಅಭಿಯಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ಇದು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ನಡೆಸಿರುವ ಷಡ್ಯಂತ್ರ ಎಂದಿದ್ದಾರೆ.
ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ. ಆಧಾರ ರಹಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಮಾಡಲು ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ರಾಜ್ಯದ ಹೆಸರು ಕೆಡಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು ಎಂದರು.