ನವದೆಹಲಿ, ಸೆ 21 (DaijiworldNews/DB): ಆಪರೇಷನ್ ಥಂಡರ್ ಸ್ಟಾರ್ಮ್ ಅಡಿ ನಕ್ಸಲ್ ಚಟುವಟಿಕೆ ನಿಗ್ರಹ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಮೂರು ದಶಕ ನಕ್ಸಲರ ಹಿಡಿತದಲ್ಲಿದ್ದ ಬುದ್ದ ಪರ್ವತ ನಮ್ಮ ವಶವಾಗಿದೆ ಎಂದು ಸಿ.ಆರ್.ಪಿ.ಎಫ್. ಭದ್ರತಾ ವಿಭಾಗದ ಡಿಜಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ಈ ವರ್ಷ ಏಪ್ರಿಲ್ ತಿಂಗಳವರೆಗೆ 14 ಮಂದಿ ನಕ್ಸಲರನ್ನು ವಿವಿಧ ಕಡೆಗಳಲ್ಲಿ ಹತ್ಯೆ ಮಾಡಲಾಗಿದೆ. ಛತ್ತೀಸ್ ಗಢದಲ್ಲಿ ಏಳು, ಜಾರ್ಖಂಡ್ನಲ್ಲಿ 4, ಮಧ್ಯಪ್ರದೇಶದಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. 578 ಮಂದಿಯನ್ನು ದೇಶದ ವಿವಿಧೆಡೆಗಳಿಂದ ಬಂಧಿಸಲಾಗಿದೆ ಎಂದರು.
ಜಾರ್ಖಂಡ್ನ ಬುದ್ದ ಪರ್ವತ ಮೂರು ದಶಕಗಳಿಂದ ನಕ್ಸಲರ ವಶವಾಗಿತ್ತು. ಸದ್ಯ ಅದನ್ನು ಅವರ ಹಿಡಿತದಿಂದ ಮುಕ್ತಗೊಳಿಸಿರುವುದು ಮತ್ತು ಸಿಆರ್ಪಿಎಫ್ ತನ್ನ ವಶಕ್ಕೆ ಸಂಪೂರ್ಣವಾಗಿ ಪಡೆದುಕೊಂಡಿರುವುದು ಬಹುದೊಡ್ಡ ಯಶಸ್ಸಾಗಿದೆ. ಬಿಹಾರ-ಜಾರ್ಖಂಡ್ ನಕ್ಸಲ್ ಮುಕ್ತ ಎಂದು ಇನ್ನು ಮುಂದೆ ನಾವು ಹೇಳಿಕೊಳ್ಳಬಹುದು. ಅಲ್ಲಿಗೆ ಹೆಲಿಕಾಪ್ಟರ್ನ ಮೂಲಕ ಸೇನೆಯನ್ನು ನಿಯೋಜಿಸಲಾಗಿದೆ. ಅಲ್ಲದೆ ಶಾಶ್ವತ ಶಿಬಿರಗಳನ್ನೂ ಅಲ್ಲಿ ಮಾಡಲಾಗಿದೆ ಎಂದವರು ತಿಳಿಸಿದರು.
ಬುದ್ದ ಪರ್ವತವನ್ನು ನಕ್ಸಲರಿಂದ ಮುಕ್ತಿಗೊಳಿಸುವುದು ಸುಲಭವಾಗಿರಲಿಲ್ಲ. ಸಿಆರ್ಪಿಎಫ್ ಇದಕ್ಕಾಗಿ ದೊಡ್ಡದಾದ ಮೂರು ಕಾರ್ಯಾಚರಣೆಗಳನ್ನು ನಡೆಸಿತು. ಆಕ್ಟೋಪಸ್, ಬುಲ್ಬುಲ್ ಮತ್ತು ಥಂಡರ್ ಸ್ಟಾಮ್ ಕಾರ್ಯಾಚರಣೆ ಮೂಲಕ ಬುದ್ದ ಪರ್ವತ ನಮ್ಮ ವಶವಾಯಿತು ಎಂದವರು ಮಾಹಿತಿ ನೀಡಿದರು.