ಬೆಂಗಳೂರು, ಸೆ 21 (DaijiworldNews/DB): ಕೆಲವರು ರಾಜ್ಯ ಮತ್ತು ನನ್ನ ಹೆಸರನ್ನು ಕೆಡಿಸುವ ಷಡ್ಯಂತ್ರದ ಭಾಗವಾಗಿ ಪೇ ಸಿಎಂ ಅಭಿಯಾನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪೇ ಸಿಎಂ ಅಭಿಯಾನದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸುವ ಉದ್ದೇಶದಿಂದಲೇ ಈ ಅಭಿಯಾನವನ್ನು ಮಾಡುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಆಧಾರರಹಿತವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಈ ರೀತಿಯ ಅಭಿಯಾನ ನಡೆಸುವುದು ಸಲ್ಲ. ಇದು ಸುಳ್ಳು ಎಂಬುದು ಜನರಿಗೆ ತಿಳಿದಿದೆ. ಇಂತಹ ಅಭಿಯಾನಗಳಿಗೆ ಜನ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಆದರೆ ರಾಜ್ಯದ ಹೆಸರು ಕೆಡಿಸುವ ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕುವುದು ಅಗತ್ಯ ಎಂದವರು ಪ್ರತಿಪಾದಿಸಿದರು.
ಪೊಲೀಸರಿಂದ ತೀವ್ರ ಶೋಧ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಗುರಿಯಾಗಿಸಿ ಪೇ ಸಿಎಂ ಪೋಸ್ಟರ್ನ್ನು ನಗರದ ವಿವಿಧೆಡೆ ಅಂಟಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯವರ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.
ಪೇಸಿಎಂ ಪೋಸ್ಟರ್ ಅಂಟಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೇಂದ್ರ ವಿಭಾಗದ ಪೊಲೀಸರು ಸಾರ್ವಜನಿಕ ಸ್ಥಳಗಳ ವಿರೂಪ ಕಾಯಿದೆಯಡಿ ಒಂದು ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಡಿಸಿಪಿಗಳೂ ತಮ್ಮ ವಿಭಾಗಗಳಲ್ಲಿ ಪೋಸ್ಟರ್ ಇದ್ದಲ್ಲಿ ಪರಿಶೀಲಿಸಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹೈಗ್ರೌಂಡ್ಸ್ ಪೊಲೀಸರು ಪ್ರಕರಣವೊಂದನ್ನು ಈಗಾಗಲೇ ದಾಖಲಿಸಿದ್ದು, ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು ಖುದ್ದಾಗಿ ಪರಿಶೀಲನೆಗಿಳಿದಿದ್ದಾರೆ. ಎಲ್ಲಾ ಠಾಣಾ ವ್ಯಾಪ್ತಿಯಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಪೋಸ್ಟರ್ಗಳು ಪತ್ತೆಯಾಗಿರುವ ಕಡೆ ಹೊಟೇಲ್ ಸೇರಿದಂತೆ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಲ್ದಾಣ, ನಿರ್ಮಾಣ ಸ್ಥಳದಲ್ಲಿ ಪೋಸ್ಟರ್ ಅಂಟಿಸಿರುವುದು ಗಮನಕ್ಕೆ ಬಂದಿದೆ. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ ಪೋಸ್ಟರ್ಗಳನ್ನು ಪೌರಕಾರ್ಮಿಕರು ಈಗಾಗಲೇ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.