ಲಕ್ನೋ, ಸೆ 21 (DaijiworldNews/DB): ಜೈಲರ್ಗೆ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ಪಿ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಯನ್ನು ದೋಷಿ ಎಂದು ಪರಿಗಣಿಸಿರುವ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2003ರಲ್ಲಿ ಜೈಲರ್ ಎಸ್ ಕೆ ಅವಾಸ್ಥಿ ಅವರ ಹಣೆಗೆ ಮುಖ್ತಾರ್ ಅನ್ಸಾರಿ ಪಿಸ್ತೂಲ್ ಹಿಡಿದು ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಅಲಾಂಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಜೈಲಿನಲ್ಲಿದ್ದ ಅನ್ಸಾರಿಯನ್ನು ಭೇಟಿಯಾಗಲು ಬಂದಿದ್ದವರನ್ನು ತಪಾಸಣೆ ನಡೆಸಿದ್ದಾಕ್ಕಾಗಿ ಅನ್ಸಾರಿ ನನ್ನ ಹಣೆ ಮೇಲೆ ಪಿಸ್ತೂಲ್ ಹಿಡಿದು ಬೆದರಿಕೆಯೊಡ್ಡಿದ್ದರು ಎಂದು ಜೈಲರ್ ದೂರಿನಲ್ಲಿ ತಿಳಿಸಿದ್ದರು.
ಆದರೆ ವಿಚಾರಣಾ ಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು. ಬಳಿಕ ವಿಚಾರಣಾ ಕೋರ್ಟ್ ಆದೇಶ ಪ್ರಶನ್ಇಸಿ ಉತ್ತರ ಪ್ರದೇಶ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಏಕಸದಸ್ಯ ಪೀಠದ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರು ಮುಖ್ತಾರ್ ಅನ್ಸಾರಿಯನ್ನು ದೋಷಿ ಎಂದು ಪರಿಗಣಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.