ಚೆನ್ನೈ, ಸೆ 21 (DaijiworldNews/DB): ವೀಡಿಯೋ ಕಾಲ್ ಮೂಲಕ ವೈದ್ಯ ನೀಡಿದ ಸೂಚನೆಯಂತೆ ದಾದಿಯರು ಹೆರಿಗೆ ನಡೆಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಹೆರಿಗೆ ವೇಳೆ ಮೃತ ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾರೆ.
ಸೋಮವಾರ ಹೆರಿಗೆ ದಿನಾಂಕ ನೀಡಿದ ಹಿನ್ನೆಲೆಯಲ್ಲಿ ಮದುರಾಂತಕಂ ಬಳಿಯ ಚುನಂಬೆಡುವಿನ ನಿವಾಸಿ ಪುಷ್ಪಾ (32) ಚೆಂಗಲಪಟ್ಟುವಿನ ಚುನಂಬೆಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಆದರೆ ಅವರಿಗೆ ಹೆರಿಗೆ ನೋವು ಇಲ್ಲದ ಕಾರಣ ದಾದಿಯರು ಮನೆಗೆ ಹಿಂತಿರುಗಲು ಸೂಚಿಸಿದರು. ಬಳಿಕ ಸಂಜೆ ವೇಳೆಗೆ ಮತ್ತೆ ಅದೇ ಆರೋಗ್ಯ ಕೇಂದ್ರಕ್ಕೆ ಪುಷ್ಪಾ ಬಂದಿದ್ದರು. ಈ ವೇಳೆ ಸ್ಕ್ಯಾನಿಂಗ್ ರಿಪೋರ್ಟ್ನ್ನು ದಾದಿಯರು ಪರಿಶೀಲಿಸಿದ್ದಾರೆ. ಇದರಲ್ಲಿ ತೊಡಕುಗಳಿರುವುದು ಗೊತ್ತಾಗಿ ಕೂಡಲೇ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ತತ್ಕ್ಷಣ ವೀಡಿಯೋ ಕರೆ ಮಾಡಿದ ವೈದ್ಯರು ಹೆರಿಗೆ ಮಾಡಿಸುವ ಪ್ರಕ್ರಿಯೆಯನ್ನು ವೀಡಿಯೋ ಕರೆಯಲ್ಲಿ ದಾದಿಯರಿಗೆ ತಿಳಿಸಿದ್ದಾರೆ.
ಬಳಿಕ ಇದು ಬ್ರೀಚ್ ಪ್ರೆಸೆಂಟೇಶನ್ (ತಲೆಯ ಬದಲಿಗೆ ಪಾದಗಳು ಹೊರಗೆ ಬರುವ ಹೆರಿಗೆ ಪ್ರಕ್ರಿಯೆ) ಆಗಿರುವುದರಿಂದ ಮಧುರಾಂತಕಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ತಿಳಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಪುಷ್ಪಾಗೆ ಹೆರಿಗೆಯಾಗಿದೆ. ಅವರು ಮೃತಪಟ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಲ್ಲದೆ ಪುಷ್ಪಾ ಕೂಡಾ ರಕ್ತಸ್ರಾವದಿಂದಾಗಿ ಅಸ್ವಸ್ಥರಾಗಿದ್ದು, ರಾತ್ರಿ ವೇಳೆ ಆರೋಗ್ಯ ಸಹಜ ಸ್ಥಿತಿಗೆ ಮರಳಿತ್ತು.
ಈ ನಡುವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಟಿ.ಎಸ್. ಸೆಲ್ವವಿನಾಯಗಂ ತಿಳಿಸಿರುವುದಾಗಿ ವರದಿಯಾಗಿದೆ.