ಜಾರ್ಖಂಡ್, ಸೆ 21 (DaijiworldNews/DB): ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಜಾರ್ಖಂಡ್ನ ಶಾಸಕಿಯೊಬ್ಬರು ಬುಧವಾರ ಕೆಸರಿನ ಹೊಂಡದಲ್ಲಿ ಸ್ನಾನ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 133 ದುರಸ್ತಿಗೆ ಆಗ್ರಹಿಸಿ ಗೊಡ್ಡಾದ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರೇ ಕೆಸರಿನಲ್ಲಿ ಮಿಂದೆದ್ದು ಪ್ರತಿಭಟಿಸಿದವರು. ಹೆದ್ದಾರಿಯು ಕೆಸರುಮಯವಾಗಿದ್ದು, ಹೊಂಡಗುಂಡಿ ಬಿದ್ದಿದೆ. ಇದರಿಂದ ಸಂಚಾರವೇ ದುಸ್ತರವಾಗಿದ್ದು, ಸಾರ್ವಜನಿಕರು ವೃಥಾ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಕೂಡಲೇ ಹೆದ್ದಾರಿಯಲ್ಲಿ ಬಿದ್ದಿರುವ ಹೊಂಡ ಸರಿಪಡಿಸಬೇಕು. ಕೆಲಸ ಆರಂಭವಾಗುವವರೆಗೂ ರಸ್ತೆಯಿಂದ ಏಳುವುದಿಲ್ಲ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.
ರಸ್ತೆ ಹದಗೆಟ್ಟು ಅನೇಕ ಬಾರಿ ಅಪಘಾತಗಳು ಸಂಭವಿಸಿವೆ. ಈ ಹಿಂದೆ ಹಲವು ಬಾರಿ ದುರಸ್ತಿ ಮಾಡಿದ್ದರೂ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಮತ್ತೆ ಗುಂಡಿ ಬಿದ್ದು, ಮಳೆಗಾಲದಲ್ಲಿ ಕೆಸರು ತುಂಬಿಕೊಳ್ಳುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದವರು ಇದೇ ವೇಳೆ ಒತ್ತಾಯಿಸಿದ್ದಾರೆ.