ಲಖನೌ, ಸೆ 21 (DaijiworldNews/DB): ಸೆಕೆಯಿಂದ ರಕ್ಷಿಸಿಕೊಳ್ಳಲು ವೃದ್ದರೊಬ್ಬರು ಸೋಲಾರ್ ಮೂಲಕ ತಿರುಗುವ ಫ್ಯಾನ್ನ್ನು ಹೆಲ್ಮೆಟ್ಗೆ ಕಟ್ಟಿ ತಲೆಯ ಮೇಲೆ ಇಟ್ಟುಕೊಂಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗಿವೆ. ವೃದ್ದನ ಹೊಸ ಐಡಿಯಾಕ್ಕೆ ಹಲವರು ಬೆರಗಾಗಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯ ಲಲ್ಲುರಾಮ್ (77) ಅವರೇ ತಲೆ ಮೇಲೆ ಫ್ಯಾನ್ ಇಟ್ಟುಕೊಂಡು ಓಡಾಡುವ ವೃದ್ದ. ಇವರು ವೃತ್ತಿಯಲ್ಲಿ ಹೂ ಮಾರುವವರಾಗಿದ್ದು, ಬಿಸಿಲಿನ ಕಾವು ಮತ್ತು ಸೆಕೆಯಿಂದ ರಕ್ಷಿಸಿಕೊಳ್ಳಲು ಈ ಐಡಿಯಾ ಕಂಡು ಕೊಂಡಿದ್ದಾರೆ. ಹಳದಿ ಬಣ್ಣದ ಹೆಲ್ಮೆಟ್ನ ಮುಂಭಾಗದಲ್ಲಿ ಸಣ್ಣದಾದ ಫ್ಯಾನ್ ಇಟ್ಟು ತಲೆಗೆ ಕಟ್ಟಿಕೊಂಡಿರುವ ವೃದ್ದ, ಹೆಲ್ಮೆಟ್ ಮೇಲೆ ಚಿಕ್ಕದಾದ ಸೋಲಾರ್ ಫಲಕವನ್ನು ಅಳವಡಿಸಿಕೊಂಡಿದ್ದಾರೆ. ಈ ಫ್ಯಾನ್ ಸದಾ ಕಾಲ ತಿರುಗುತ್ತಲೇ ಇರುತ್ತದೆ. ಹೀಗಾಗಿ ಅವರು ಎಷ್ಟೇ ಬಿಸಿಲಿನಿಂದ ಕೂಡಿರುವ ಜಾಗಕ್ಕೆ ಹೋದರೂ ಫ್ಯಾನ್ ತಿರುಗಿ ತಣ್ಣನೆಯ ಅನುಭವ ನೀಡುತ್ತಿರುತ್ತದೆ. ಸೆಕೆಯಿಂದ ರಕ್ಷಿಸಿಕೊಳ್ಳಲು ವೃದ್ದ ಮಾಡಿರುವ ಐಡಿಯಾಗೆ ಹಲವರು ಮಾರು ಹೋಗಿದ್ದಾರೆ.
ಅತಿಯಾದ ಉಷ್ಣತೆಯಿಂದಾಗಿ ಆರೋಗ್ಯ ಸಮಸ್ಯೆ ಕಾಡುತ್ತಿದ್ದ ಕಾರಣ ಎಂದಿನಂತೆ ಹೂ ಮಾರಾಟಕ್ಕೆ ಹೋಗಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಹೂ ಮಾರಾಟವೇ ಜೀವನಾಧಾರವಾಗಿರುವುದರಿಂದ ಹೋಗದೇ ಇರಲೂ ಆಗುತ್ತಿರಲಿಲ್ಲ. ಹೀಗಾಗಿ ಲಲ್ಲುರಾಮ್ ಈ ಹೊಸ ಐಡಿಯಾವನ್ನು ಕಂಡುಕೊಂಡರು. ಬಿಸಿಲಿಗೆ ನಡೆದಾಡುವಾಗ ತಲೆ ಮೇಲ್ಬಾಗದ ಹೆಲ್ಮೆಟ್ ಮೇಲಿರುವ ಸೋಲಾರ್ ಪ್ಯಾನೇಲ್ ಹೀಟ್ ಆಗಿ ಅದರಿಂದ ಫ್ಯಾನ್ ತಿರುಗಲು ಆರಂಭಿಸುತ್ತದೆ.