ಜೈಪುರ, ಸೆ 21 (DaijiworldNews/DB): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ನಿರ್ಧಾರ ಮಾಡಿದ್ದಲ್ಲಿ ಶಾಸಕರನ್ನು ದೆಹಲಿಗೆ ಬರ ಮಾಡಿಕೊಳ್ಳುತ್ತೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ನೂತನ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ ಬಳಿಕ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ನಿರ್ಧರಿಸಿದಲ್ಲಿ ಅದಕ್ಕೂ ಮೊದಲು ಭಾರತ್ ಜೋಡೋ ಯಾತ್ರೆ ಸಾಗುತ್ತಿರುವ ಕೊಚ್ಚಿಗೆ ಭೇಟಿ ನೀಡಲಾಗುವುದು. ಅಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರತಾಪ್ ಸಿಂಗ್, ಒಂದು ವೇಳೆ ಅಶೋಕ್ ಗೆಹ್ಲೋಟ್ ಅವರು ನಾಮಪತ್ರ ಸಲ್ಲಿಸಲು ನಿರ್ಧರಿಸಿದರೆ ಶಾಸಕರನ್ನು ದೆಹಲಿಗೆ ಬರ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಶಾಸಕರಿಗೆ ಸಂದೇಶ ಸಿಗಲಿದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಅಕ್ಟೋಬರ್ 17ರಂದು ನಡೆಯಲಿದೆ. ಇದಕ್ಕಾಗಿ ಸೆಪ್ಟೆಂಬರ್ 24ರಿಂದ 30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಅಕ್ಟೋಬರ್ 8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅ. 19ಕ್ಕೆ ಫಲಿತಾಂಶ ಹೊರಬೀಳಲಿದೆ.