ತಿರುವನಂತಪುರ, ಸೆ 21 (DaijiworldNews/DB): ಮದುವೆ ದಿನವನ್ನು ಅವಿಸ್ಮರಣೀಯವಾಗಿಸಲು ವಧು-ವರರು ಫೋಟೋಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಧು ರಸ್ತೆ ಗುಂಡಿಗಳ ಬಳಿ ಫೋಟೋಶೂಟ್ ಮಾಡಿಸಿಕೊಂಡು ಮದುವೆಯ ಸಂಭ್ರಮದ ನಡುವೆಯೂ ಸಾರ್ವಜನಿಕ ಸಮಸ್ಯೆಗಳನ್ನು ವಿಶಿಷ್ಟ ರೀತಿಯಲ್ಲಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದಾರೆ.
ಕೇರಳದ ವಧುವೊಬ್ಬರು ರಸ್ತೆ ಗುಂಡಿಗಳ ನಡುವೆ ಫೋಟೋ ತೆಗೆಸಿಕೊಂಡಾಕೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಧುವಿನ ಸಾರ್ವಜನಿಕ ಕಾಳಜಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಹೊಂಡ ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ಸಂಚರಿಸುವುದೇ ಸವಾಲು. ಮಳೆಗಾಲದಲ್ಲಂತೂ ಇದೊಂದು ನರಕಯಾತನೆ. ಆಡಳಿತ ವರ್ಗಕ್ಕೆ ಹಲವು ಬಾರಿ ಒತ್ತಾಯಿಸಿದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದೇ ಹೆಚ್ಚು. ಹೀಗಿರುವಾಗ ಈ ವಧು ವಿಶಿಷ್ಟ ರೀತಿಯಲ್ಲಿ ರಸ್ತೆಗುಂಡಿಗಳ ಸಮಸ್ಯೆಯನ್ನು ಆಡಳಿತ ವರ್ಗಕ್ಕೆ ಮುಟ್ಟಿಸಿ ಗಮನ ಸೆಳೆದಿದ್ದಾರೆ.
ಮಧುಮಗಳ ಅಲಂಕಾರದಲ್ಲಿ ಚೆಂದದ ಸೀರೆಯುಟ್ಟುಕೊಂಡಿರುವ ವಧು ರಸ್ತೆಗುಂಡಿಗಳ ನಡುವೆಯೇ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಮಳೆ ನೀರು ತುಂಬಿದ್ದರೂ, ಬಟ್ಟೆಗೆ ಕೊಳೆಯಾಗುತ್ತದೆ ಎಂಬುದನ್ನೆಲ್ಲ ಬದಿಗೊತ್ತಿ ಇಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.