ಬೆಂಗಳೂರು, ಸೆ 21 (DaijiworldNews/MS): ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಇಬ್ಬರನ್ನು ಬಂಧಿಸಿದ್ದು ಈ ಪೈಕಿ, ಮಂಗಳೂರಿನಲ್ಲಿ ನೆಲೆಸಿದ್ದ ಶಿವಮೊಗ್ಗ ಮೂಲದ ಮಾಜ್ ಮುನಿರ್ ಅಹ್ಮದ್ ಬಂಧಿತ ಆರೋಪಿಯಾಗಿದ್ದಾನೆ. ಈತ ಲಷ್ಕರ್ ಪರವಾದ ಗೋಡೆ ಬರಹ ಬರೆದ ಕಾರಣಕ್ಕೆ ಎರಡು ವರ್ಷದ ಹಿಂದೆ ಸ್ನೇಹಿತ ಶಾರೀಕ್ ಜತೆ ಬಂಧಿಸಲ್ಪಟ್ಟಿದ್ದ.
ಮಂಗಳೂರಿನ ಆರ್ಯ ಸಮಾಜ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ತಂದೆ - ತಾಯಿ ಜತೆ ವಾಸವಿದ್ದು,ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮಾಜ್ ಮುನಿರ್ ನನ್ನು ಶಿವಮೊಗ್ಗ ಪೊಲೀಸರು ಸೋಮವಾರ, ಮಂಗಳೂರಿನಿಂದ ವಶಕ್ಕೆ ಪಡೆದುಕೊಂಡಿದ್ದರು.
ಆದರೆ ಈ ವಿಚಾರ ತಂದೆಗೆ ಗೊತ್ತಿದ್ದರೂ, ಮಗ ಕಾಣೆಯಾಗಿದ್ದಾನೆ ಎಂದು ಕದ್ರಿ ಠಾಣೆಗೆ ಇ-ಮೇಲ್ ಮೂಲಕ ದೂರು ನೀಡಿದ್ದರು. ಮಾತ್ರವಲ್ಲದೆ ಆತನನ್ನು ಹುಡುಕಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರ್ಕಾರಕ್ಕೆ ಆದೇಶಿಸುವಂತೆ ಹೈಕೋರ್ಟ್ ಗೂ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಭಯೋತ್ಪಾದಕ ಕೃತ್ಯ ಎಸಗಲು ಒಳಸಂಚು ರೂಪಿಸಿದ ಆರೋಪದಡಿ ವಿಚಾರಣೆಗಾಗಿ ತಮ್ಮ ಮಗನನ್ನು ಪೊಲೀಸರು ಕರೆದುಕೊಂಡು ಹೋಗಿರುವ ವಿಚಾರ ಗಮನಕ್ಕೆ ಬಂದಿದ್ದರೂ ಸಹ ಮಗನನ್ನು ಹುಡುಕಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದಾತನಿಗೆ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ 10 ಸಾವಿರ ರೂ. ದಂಡ ವಿಧಿಸಿದೆ.