ನವದೆಹಲಿ, ಸೆ 21 (DaijiworldNews/MS): ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು ನಾಲ್ವರು ಸಾವನ್ನಪ್ಪಿ , ಮೂವರು ಗಂಭೀರ ಗಾಯಗೊಂಡ ಘಟನೆ ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಕರೀಂ (52 ವರ್ಷ), ಚೋಟ್ಟೆ ಖಾನ್ (25 ವರ್ಷ), ಶಾ ಆಲಂ (38 ವರ್ಷ) ಹಾಗೂ ರಾಹುಲ್ (45 ವರ್ಷ) ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯರಾತ್ರಿ 1:51ಕ್ಕೆ ಡಿಟಿಸಿ ಡಿಪೋ ಟ್ರಾಫಿಕ್ ಸಿಗ್ನಲ್ ದಾಟಿ ಡಿಎಲ್ಎಫ್ ಟಿ ಪಾಯಿಂಟ್ ಕಡೆಗೆ ಹೋಗುತ್ತಿದ್ದ ಟ್ರಕ್ ರಸ್ತೆ ವಿಭಜಕದಲ್ಲಿ ಮಲಗಿದ್ದ ಆರು ಜನರ ಮೇಲೆ ಟ್ರಕ್ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತಿಬ್ಬರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಘಟನೆ ನಡೆದ ವೇಳೆ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾಹನ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಆರ್ ಸತ್ಯಸುಂದರಂ ತಿಳಿಸಿದ್ದಾರೆ.