ಬೆಂಗಳೂರು, ಸೆ 21 (DaijiworldNews/MS): 2014-15 ರಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕಾತಿ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೊರ್ವ ಶಿಕ್ಷಕನನ್ನು ಬಂಧಿಸಿದ್ದಾರೆ.
ಬಂಧಿತ ಶಿಕ್ಷಕನನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬೈರವಾಡಗಿ ಪ್ರೌಢಶಾಲೆಯ ಶಿಕ್ಷಕ ಅಶೋಕ್ ಚೌಹಾಣ್ ಎನ್ನಲಾಗಿದೆ. ಈತ ಅಕ್ರಮವಾಗಿ ಶಿಕ್ಷಕ ಹುದ್ದೆಗೆ ನೇಮಕವಾಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಸಿಐಡಿ ಅಧಿಕಾರಿಗಳು ಅಶೋಕ್ ಚೌಹಾಣ್ ನನ್ನು ಬಂಧಿಸಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತ ಶಿಕ್ಷಕ ಅಶೋಕ್ ಚೌಹಾಣ್ ಮೊದಲು ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಸೇವೆ ಸಲ್ಲಿಸಿದ್ದ. ಬಳಿಕ ವಿಜಯಪುರ ಜಿಲ್ಲೆಗೆ ನೇರವಾಗಿ ವರ್ಗವಾಗಿ ಬಂದಿದ್ದ. ಶಿಕ್ಷಕರ ನೇಮಕಾತಿ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈವರೆಗೆ ಮೂವರನ್ನು ಬಂಧಿಸಿದೆ.
ಚಡಚಣ ತಾಲುಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ, ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಿದ್ರಾಮಪ್ಪ ಬಿರಾದಾರ್ ಈ ಹಿಂದೆ ಬಂಧಿಸಲಾಗಿತ್ತು.