ಬೆಂಗಳೂರು, ಸೆ 20 (DaijiworldNews/DB): ಉತ್ತರ ಕನ್ನಡ ಭಾಗದ ಜನರ ಹಲವು ವರ್ಷಗಳ ಹೋರಾಟವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿದೆ. ಆ ಮೂಲಕ ಈ ಭಾಗದ ಜನರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಉತ್ತರ ಕನ್ನಡದ ಜನರು ಹಲವು ವರ್ಷಗಳಿಂದ ತಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಹೋರಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರಾದಿಯಾಗಿ ಎಲ್ಲರಿಗೂ ಒತ್ತಡ ಹಾಕಿದ್ದಾರೆ. ಇದೀಗ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣದ ಅಧಿಕೃತ ಘೋಷಣೆಯನ್ನು ಸರ್ಕಾರ ಮಾಡಲಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆ ನಿರ್ಮಾಣ ಸಂಬಂಧ ಈಗಾಗಲೇ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಉತ್ತರ ಕನ್ನಡ ಜಿಲ್ಲೆಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮುಂಗಾರು ಅಧಿವೇಶನ ಮುಗಿದ ಕೂಡಲೇ ಜಿಲ್ಲೆಗೆ ಸಿಎಂ ಬೊಮ್ಮಾಯಿಯವರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗುವುದು. ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.