ನವದೆಹಲಿ, ಸೆ 20 (DaijiworldNews/DB): ಸುದ್ದಿಗಳ ಪ್ರಸಾರದಲ್ಲಿ ಮಾಧ್ಯಮಗಳು ತಟಸ್ಥ ನಿಲುವು ಹೊಂದಿರಬೇಕು. ವಿಶ್ವಾಸಾರ್ಹತೆ ಕಾಯ್ದುಕೊಳ್ಳವಲ್ಲಿ ಆದ್ಯ ಗಮನ ಹರಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲಾಲಂಪುರ ಮೂಲದ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಝೇಶನ್ನ ಅಂಗಸಂಸ್ಥೆ ಏಷ್ಯಾ-ಪೆಸಿಫಿಕ್ ಇನ್ಸ್ಟಿಟ್ಯೂಟ್ ಫಾರ್ ಬ್ರಾಡ್ಕಾಸ್ಟಿಂಗ್ ಡೆವಲೆಪ್ಮೆಂಟ್ ವತಿಯಿಂದ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಬ್ಬರದ ಚರ್ಚೆಗಳು ವೀಕ್ಷಕರನ್ನು ಸೆಳೆಯುತ್ತವೆ. ಆದರೆ ವಿಶ್ವಾಸಾರ್ಹತೆ ಗಳಿಸುವುದಿಲ್ಲ. ತಟಸ್ಥ ನಿಲುವಿನ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಮಾಧ್ಯಮಗಳ ಅಳವಡಿಸಿಕೊಳ್ಳಬೇಕು ಎಂದರು.
ಧ್ರುವೀಕರಣ, ಸುಳ್ಳು ವೈಭವೀಕರಣವನ್ನು ತಡೆದು ಸತ್ಯಾಸತ್ಯತೆ ಪರಿಶೀಲಿಸಿಕೊಂಡು ಪ್ರಸಾರ ಮಾಡಬೇಕು. ಅತಿಥಿಗಳು ಬೇಕಾಬಿಟ್ಟಿ ಮಾತನಾಡುವುದರಿಂದ ವಿಶ್ವಾಸಾರ್ಹತೆ ಕುಸಿಯುತ್ತದೆ. ಅದೇ ಅವರ ಮಾತು, ತೋರಿಸುವ ದೃಶ್ಯಗಳು ಸೌಮ್ಯವಾಗಿದ್ದಲ್ಲಿ ಅದು ವೀಕ್ಷಕರ ವಿಶ್ವಾಸ ಗಳಿಸಲು ನೆರವಾಗುತ್ತದೆ ಎಂದವರು ತಿಳಿಸಿದರು.
ನೈಜ, ನಿಖರ, ವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡಿ ಮಾಧ್ಯಮ ರಂಗದ ನೈತಿಕ ಮೌಲ್ಯಗಳನ್ನು ರಕ್ಷಿಸುವ ಗುರುತರ ಜವಾಬ್ದಾರಿ ಮಾಧ್ಯಮ ಸಂಸ್ಥೆಗಳ ಮುಂದಿದೆ. ಇದು ಸವಾಲು ಕೂಡಾ ಆಗಿದ್ದು, ಸವಾಲು ಎದುರಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ವೃತ್ತಿಪರತೆ ಕಾಯ್ದುಕೊಳ್ಳಬೇಕು ಎಂದವರು ಇದೇ ವೇಳೆ ಸಲಹೆ ಮಾಡಿದರು.