ಉತ್ತರ ಪ್ರದೇಶ, ಸೆ 20 (DaijiworldNews/DB): 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದ ಅಮೆರಿಕದ ದಂಪತಿ ಇದೀಗ ಹಿಂದೂ ಸಂಪ್ರದಾಯದಂತೆ ಭಾರತದಲ್ಲಿ ಶನಿವಾರ ಮತ್ತೆ ವಿವಾಹವಾಗಿ ಗಮನ ಸೆಳೆದಿದ್ದಾರೆ. ಭಾರತದ ಸಂಪ್ರದಾಯಗಳಿಗೆ ಮಾರು ಹೋಗಿ ಅವರು ಈ ವಿವಾಹ ಮಾಡಿಕೊಂಡಿದ್ದಾರೆ.
ಅಮೇರಿಕ ಮೂಲದ ಮುಸ್ಲಿಂ ದಂಪತಿಗಳಾದ ಕಿಯಾಮಾ ದಿನ್ ಖಲೀಫಾ ಮತ್ತು ಕೇಶ ಖಲೀಫಾ ಅವರೇ ಹದಿನೆಂಟು ವರ್ಷಗಳ ಬಳಿಕ ಭಾರತೀಯ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ದಂಪತಿ. ಒಂಬತ್ತು ಮಕ್ಕಳ ಪೋಷಕರಾಗಿರುವ ಈ ದಂಪತಿ ಕಳೆದ ಕೆಲ ದಿನಗಳಿಂದ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಲ್ಲಿನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತಿಳಿದು ಖುಷಿ ಪಟ್ಟಿದ್ದಾರೆ. ಅಲ್ಲದೆ, ಹದಿನೆಂಟು ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ಶನಿವಾರ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ಮದುವೆಯಾಗಿದ್ದಾರೆ. ಜೌನ್ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಅವರಿಬ್ಬರು ವಿವಾಹವಾದರು.
ದಂಪತಿ ಸುಮಾರು 40 ವರ್ಷದ ಆಸುಪಾಸಿನವರಿರಬಹುದು. ಕೇಶ ಖಲೀಫಾ ಅವರು ಹೇಳುವಂತೆ ಅವರ ಅಜ್ಜ ಭಾರತೀಯ ಮೂಲದವರು ಎಂದು ದೇವಸ್ಥಾನದ ಅರ್ಚಕ ರವಿಶಂಕರ್ ಗಿರಿ ತಿಳಿಸಿರುವುದಾಗಿ ವರದಿಯಾಗಿದೆ.
ಭಾರತೀಯ ಹಿಂದೂ ಸಂಸ್ಕೃತಿಯನ್ನು ತಿಳಿದು ದಂಪತಿ ತುಂಬಾ ಖುಷಿ ಪಟ್ಟರು. ಅಲ್ಲದೆ, ಇಲ್ಲಿನ ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹವಾಗುವ ಇಂಗಿತ ವ್ಯಕ್ತಪಡಿಸಿದರು. ಅದರಂತೆ ವಿವಾಹ ಕಾರ್ಯ ನಡೆಸಿದ್ದೇವೆ. ಹಿಂದೂ ಸಂಪ್ರದಾಯದ ವಿಧಿವಿಧಾನದಂತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು ಎಂದು ಪಂಡಿತ್ ಗೋವಿಂದ ಶಾಸ್ತ್ರಿ ತಿಳಿಸಿದ್ದಾರೆ. ಮದುವೆ ನೋಂದಣಿ ಪ್ರಕ್ರಿಯೆ ಬಳಿಕ ದಂಪತಿಗೆ ವಿವಾಹ ಪ್ರಮಾಣ ಪತ್ರವನ್ನು ನೀಡಲಾಯಿತು ಎಂದು ತಿಳಿದು ಬಂದಿದೆ.