ಬೆಂಗಳೂರು, ಸೆ 20 (DaijiworldNews/DB): ಹಾಫ್ ಹೆಲ್ಮೆಟ್ ಧರಿಸುವವರ ವಿರುದ್ದ ಕಾರ್ಯಾಚರಣೆಗಿಳಿದಿರುವ ಸಂಚಾರಿ ಪೊಲೀಸರು ತಮ್ಮದೇ ಇಲಾಖೆಯ ಪೊಲೀಸರಿಗೆ ದಂಡ ವಿಧಿಸಿದ್ದಾರೆ. ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ್ದಕ್ಕಾಗಿ ಪೊಲೀಸರು ದಂಡ ಕಟ್ಟಿದ್ದಾರೆ.
ಜೀವರಕ್ಷಕವಲ್ಲದ ಹಾಫ್ ಹೆಲ್ಮೆಟ್ ಧರಿಸದಂತೆ ನಗರಾದ್ಯಂತ ಸಂಚಾರಿ ಪೊಲೀಸರು ಜಾಗೃತಿಯಲ್ಲಿ ತೊಡಗಿದ್ದಾರೆ. ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವುದಕ್ಕೆ ಹೇಳಲಾಗುತ್ತಿದೆ. ಆದಾಗ್ಯೂ ಪೊಲೀಸರ ಕಣ್ತಪ್ಪಿಸಿ ಕೆಲವರು ಹಾಫ್ ಹೆಲ್ಮೆಟ್ ಧರಿಸುತ್ತಿದ್ದಾರೆ. ಇದೀಗ ಇಂತಹವರ ವಿರುದ್ದ ಕಾರ್ಯಾಚರಣೆಗಿಳಿದಿರುವ ಸಂಚಾರಿ ಪೊಲೀಸರು ಅಂತಹವರಿಗೆ ದಂಡ ವಿಧಿಸಿ ತಿಳಿ ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ರಾಜಧಾನಿಯಲ್ಲಿ ಕೆಲವು ಪೊಲೀಸರೇ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುತ್ತಿರುವುದನ್ನು ನೋಡಿದ ಸಂಚಾರಿ ಪೊಲೀಸರು ಅವರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.
ಸಂಚಾರಿ ಪೊಲೀಸರಿಗೆ ಮತ್ತು ಲಾ ಅಂಡ್ ಆರ್ಡರ್ ಪೊಲೀಸರಿಗೆ ಅರ್ಧ ಹೆಲ್ಮೆಟ್ ಧರಿಸದಂತೆ ಇಲಾಖೆ ಸೂಚನೆ ನೀಡಿದ್ದರೂ ಕೆಲವರು ಸೂಚನೆ ನಿರ್ಲಕ್ಷಿಸಿ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದರು. ಹೀಗಾಗಿ ದಂಡ ವಿಧಿಸುವಂತೆ ಸಂಚಾರಿ ಪೊಲೀಸರಿಗೆ ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ನೀಡಿದ ಸೂಚನೆ ನೀಡಿದ ಮೇರೆಗೆ ಈ ಕಾರ್ಯಾಚರಣೆ ನಡೆಯುತ್ತಿದೆ.