ಪುಣೆ, ಸೆ 20 (DaijiworldNews/DB): ನೀರು ಕೇಳುವ ನೆಪದಲ್ಲಿ ಝೊಮೆಟೋ ಡೆಲಿವರಿ ಬಾಯ್ವೊಬ್ಬ ಯುವತಿಯೊಬ್ಬಳಿಗೆ ಬಲವಂತವಾಗಿ ಚುಂಬಿಸಿದ ಘಟನೆ ಪುಣೆಯ ಯೆವಲೇವಾಡಿಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
19 ವರ್ಷದ ಯುವತಿ ಇಬ್ಬರು ಸ್ನೇಹಿತೆಯರೊಂದಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದು, ಸ್ನೇಹಿತೆಯರು ಊರಿಗೆ ಹೋಗಿದ್ದಾಗ ಜೊಮೆಟೋದಲ್ಲಿ ಆಹಾರ ತರಿಸಿದ್ದಾಳೆ. ಈ ವೇಳೆ ಆಹಾರ ತಂದು ಕೊಟ್ಟ 42 ವರ್ಷದ ಡೆಲಿವರಿ ಬಾಯ್ ಆಕೆಯೊಂದಿಗೆ ನೀರು ಕೇಳಿದ್ದಾನೆ. ಯುವತಿ ನೀರು ತಂದು ಕೊಟ್ಟದ್ದನ್ನು ಕುಡಿದು ಆಕೆಯೊಂದಿಗೆ ಯಾರೆಲ್ಲಾ ಇರುವುದಾಗಿ ವಿಚಾರಿಸಿದ್ದಾನೆ. ಈ ವೇಳೆ ತನ್ನ ಸ್ನೇಹಿತೆಯರಿಬ್ಬರು ಊರಿಗೆ ಹೋಗಿರುವ ವಿಚಾರವನ್ನು ಆಕೆ ಹೇಳಿದ್ದಾಳೆ.
ಆಕೆ ಫ್ಲಾಟ್ನಲ್ಲಿ ಒಬ್ಬಳೇ ಇರುವ ವಿಚಾರ ತಿಳಿದು ಆತ ಇನ್ನೊಂದು ಲೋಟ ನೀರು ತರುವಂತೆ ಹೇಳಿದ್ದಾನೆ. ಆಕೆ ನೀರು ತರಲು ಒಳ ಹೋಗುತ್ತಿದ್ದಂತೆ ಹಿಂದಿನಿಂದ ಆಕೆಯನ್ನು ಎಳೆದು ಎರಡು ಬಾರಿ ಕೆನ್ನೆಗೆ ಮುತ್ತಿಕ್ಕಿದ್ದಾನೆ. ಅಲ್ಲದೆ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಬಳಿಕ ನಾನು ನಿನ್ನ ಅಂಕಲ್ ಇದ್ದಂತೆ, ಸಹಾಯ ಬೇಕಿದ್ದರೆ ಕೇಳು ಎಂದು ಪರಾರಿಯಾಗಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಆತ ಯುವತಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಇದರಿಂದ ಆತಂಕಗೊಂಡ ಆಕೆ ಪುಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ಆಧರಿಸಿ ಆತನನ್ನು ಬಂಧಿಸಿದ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.