ನವದೆಹಲಿ, ಸೆ 20 (DaijiworldNews/HR): ಕಬಡ್ಡಿ ಆಟಗಾರರಾಗಿರುವ ಬಾಲಕ, ಬಾಲಕಿಯರು ಪುರುಷರ ಶೌಚಾಲಯದ ಒಳಗೆ ಊಟ ಮಾಡುತ್ತಿರುವ ವಿಡಿಯೊ ಒಂದನ್ನು ಕಾಂಗ್ರೆಸ್ ಟ್ವೀಟ್ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ವಿಡಿಯೋದಲ್ಲಿ ಪುರುಷರ ಶೌಚಾಲಯದ ಒಳಗೆ ನೆಲದ ಮೇಲೆ ಇಡಲಾದ ಅನ್ನ ಮತ್ತು ಸಾರನ್ನು ವಿದ್ಯಾರ್ಥಿಗಳು ಬಡಿಸಿಕೊಂಡು ಊಟ ಮಾಡುತ್ತಿರುವುದನ್ನು ಕಾಣಬಹುದು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರಕ್ಕೆ ಸುಳ್ಳು ಪ್ರಚಾರ ಮಾಡಲು ಕೋಟ್ಯಂತರ ರೂಪಾಯಿ ಇದೆ. ಆದರೆ ನಮ್ಮ ಕ್ರೀಡಾಪಟುಗಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲು ಹಣವಿಲ್ಲ. ಇಂತಹ ಸರ್ಕಾರಕ್ಕೆ ಧಿಕ್ಕಾರ ಎಂದು ವಾಗ್ದಾಳಿ ನಡೆಸಿದೆ.