ಲಕ್ನೋ, ಸೆ 20 (DaijiworldNews/DB): ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣದ ಮರು ತನಿಖೆಗೆ ಲಕ್ನೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ಸಿಬಿಐ ಸಲ್ಲಿಸಿದ ತನಿಖಾ ವರದಿಯನ್ನು ತಿರಸ್ಕರಿಸಿ ಈ ಆದೇಶ ಹೊರಡಿಸಿದೆ.
ಅನುರಾಗ್ ತಿವಾರಿ ಸಾವು ಪ್ರಕರಣವನ್ನು ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಸಹೋದರ ಮಾಯಾಂಕ್ ತಿವಾರಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಮರು ತನಿಖೆಗೆ ಆದೇಶ ನೀಡಿದ್ದಾರೆ.
ಉತ್ತರ ಪ್ರದೇಶದ ಹಜರತ್ ಗಂಜ್ ನ ಮೀರಾಬಾಯಿ ಮಾರ್ಗ್ ನ ಅತಿಥಿಗೃಹದಲ್ಲಿ 2017ರ ಮೇ/17ರಂದು ಅನುರಾಗ್ ತಿವಾರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಕರ್ನಾಟಕ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿದ್ದ ವೇಳೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಉತ್ತರ ಪ್ರದೇಶ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಿತ್ತಾದರೂ, ಕುಟುಂಬ ಸದಸ್ಯರು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಹೀಗಾಗಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಈ ಪ್ರಕರಣವನ್ನು ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ತಿವಾರಿ ಸಹೋದರರಾದ ಅಲೋಕ್ ತಿವಾರಿ ಹಾಗೂ ಮಾಯಾಂಕ್ ತಿವಾರಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.