ಪಹಲ್ಗಾಮ್ (ಜಮ್ಮು -ಕಾಶ್ಮೀರ) ಸೆ 20 (DaijiworldNews/DB): ಚಿತ್ರೀಕರಣದಲ್ಲಿ ಭಾಗಿಯಾಗಲು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ನಟ ಇಮ್ರಾನ್ ಹಶ್ಮಿ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ತಮ್ಮ ಮುಂಬರುವ ಚಿತ್ರ 'ಗ್ರೌಂಡ್ ಜೀರೋ'ದ ಚಿತ್ರೀಕರಣಬಸಲುವಾಗಿ ಹಶ್ಮಿ ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚೆಗೆ ತೆರಳಿದ್ದರು. ಶೂಟಿಂಗ್ ಮುಗಿಸಿದ ಬಳಿಕ ಪಹಲ್ಗಾಮ್ ಮುಖ್ಯ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಅಪರಿಚಿತರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಆರೋಪಿಗಳ ವಿರುದ್ದ ಸೆಕ್ಷನ್ 147, 148, 370, 336, 323ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಿರುವುದಾಗಿ ಪಹಲ್ಗಾಂ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಸಿಸಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ತೇಜಸ್ ದಿಯೋಸ್ಕರ್ ನಿರ್ದೇಶನದ ಗ್ರೌಂಡ್ ಜೀರೋ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಸೇನಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.