ನವದೆಹಲಿ, ಸೆ 20 (DaijiworldNews/DB): ಮೂರು ದಶಕಗಳಿಗೂ ಹೆಚ್ಚು ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ಐಎನ್ಎಸ್ ಅಜಯ್ ಸೇನೆಯಿಂದ ನಿವೃತ್ತಿಗೊಂಡಿದೆ. ದೇಶಕ್ಕಾಗಿ ಸುದೀರ್ಘ ಸೇವೆ ನೀಡಿದ ಅಜಯ್ಗೆ ಮುಂಬೈನ ನೇವಲ್ ಡಾಕ್ಯಾರ್ಡ್ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿದಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಐಎನ್ಎಸ್ ಅಜಯ್ ಒಟ್ಟು 32 ವರ್ಷಗಳ ಕಾಲ ದೇಶಕ್ಕಾಗಿ ತನ್ನ ಸೇವೆಯನ್ನು ನೀಡಿದೆ. ಈ ಸೇವೆಯ ಸ್ಮರಣೀಯವಾಗಿಸಲು ಗೌರವಪೂರ್ವಕವಾಗಿ ಹಡಗನ್ನು ಬೀಳ್ಕೊಡಲಾಯಿತು. ಸೂರ್ಯಾಸ್ತದ ಸಮಯದಲ್ಲಿ ಹಡಗಿನಿಂದ ರಾಷ್ಟ್ರೀಯ ಧ್ವಜ, ನೌಕಾ ಧ್ವಜವನ್ನು ಕೊನೆಯ ಬಾರಿಗೆ ಇಳಿಸಲಾಯಿತು. ಆ ಮೂಲಕ ದಶಕಗಳ ಸೇವೆಯನ್ನು ಕೊನೆಗೊಳಿಸಲಾಯಿತು.
1990 ಜನವರಿ 24ರಂದು ಐಎನ್ಎಸ್ ಅಜಯ್ ತನ್ನ ಕಾರ್ಯಾರಂಭ ಮಾಡಿತ್ತು. ಮಹಾರಾಷ್ಟ್ರ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಅವರ ಕಾರ್ಯಾಚರಣೆಯ ನಿಯಂತ್ರಣದಲ್ಲಿ 23ನೇ ಪ್ಯಾಟ್ರೋಲ್ ವೆಸೆಲ್ ಸ್ಕ್ವಾಡ್ರನ್ನ ಭಾಗವಾಗಿ ಇದು ಕೆಲಸ ನಿರ್ವಹಿತ್ತು. ಕಾರ್ಗಿಲ್ ಯುದ್ಧದ ಸಮಯದಲ್ಲಿ ನೌಕಾ ಕಾರ್ಯಾಚರಣೆಗಳಲ್ಲಿ ಐಎನ್ಎಸ್ ಅಜಯ್ ಪಾತ್ರ ಹಿರಿದಾಗಿತ್ತು.