ನವ ದೆಹಲಿ, ಸೆ 20 (DaijiworldNews/DB): ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ, ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಅವರು ಕೂಡಾ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಆದರೆ ಇದಕ್ಕೆ ಕಟುವಾಗಿಯೇ ಪ್ರತಿಕ್ರಿಯಿಸಿರುವ ಅಮರಿಂದರ್ ಸಿಂಗ್, ಪತಿ ಮಾಡಿದ್ದೆಲ್ಲವನ್ನು ಪತ್ನಿಯೂ ಅನುಸರಿಸಬೇಕೆಂಬ ನಿಯಮವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಕಾಂಗ್ರೆಸ್ ತ್ಯಜಿಸಿ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದೀಗ ಆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಪುತ್ರ ರಣೀಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್, ಮೊಮ್ಮಗ ನಿರ್ವಣ್ ಸಿಂಗ್ ಅವರನ್ನೂ ಬಿಜೆಪಿಗೆ ಸೇರ್ಪಡೆ ಮಾಡಿದ್ದಾರೆ. ಆದರೆ ಸಿಂಗ್ ಪತ್ನಿ ಪ್ರಣೀತ್ ಕೌರ್ ಅವರು ಪಟಿಯಾಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆಯಾಗಿದ್ದು, ಕುಟುಂಬ ಬಿಜೆಪಿ ಸೇರ್ಪಡೆಯಾದರೂ ಅವರಿನ್ನೂ ಕಾಂಗ್ರೆಸ್ನಲ್ಲೇ ಉಳಿದಿದ್ದಾರೆ. ಅಲ್ಲದೆ, ಕಾಂಗ್ರೆಸ್ ತೊರೆಯುವ ಬಗೆಯಾಗಲೀ, ಬಿಜೆಪಿ ಸೇರ್ಪಡೆಯ ಬಗ್ಗೆಯಾಗಲೀ ಈವರೆಗೆ ಯಾವುದೇ ಮಾತನಾಡಿಲ್ಲ. ಹೀಗಾಗಿ ಮಾಧ್ಯಮ ಮಂದಿ ಹಾಗೂ ರಾಜಕೀಯ ವಲಯದ ಕೆಲವರು ಸಿಂಗ್ ಅವರಿಗೆ ಪತ್ನಿಯ ರಾಜಕೀಯ ಭವಿಷ್ಯದ ಕುರಿತಂತೆ ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಯಿಂದ ಅಸಮಾಧಾನಗೊಂಡಿರುವ ಅಮರಿಂದರ್ ಸಿಂಗ್, ಪತಿ ಏನೆಲ್ಲಾ ಮಾಡುತ್ತಾನೋ ಅದನ್ನೆಲ್ಲ ಪತ್ನಿ ಅನುಸರಿಸಲೇಬೇಕೆಂಬ ನಿಯಮವಿಲ್ಲ. ಆಕೆಯ ಇಷ್ಟದ ಪ್ರಕಾರ ಆಕೆಯ ರಾಜಕೀಯ ಭವಿಷ್ಯ ಇರಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಟಿಯಾಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆಯಾಗಿರುವ ಪ್ರಣೀತ್ ಕೌರ್ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿ 2009ರಿಂದ 2014ರವರೆಗೆ ಕೇಂದ್ರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವರಾಗಿಯೂ ಕೆಲಸ ಮಾಡಿದ ಅನುಭವಿ.